ಜಲಂಧರ್ ನ ಮಲಿಯನ್ ಹಳ್ಳಿಯಲ್ಲಿ ನಡೆದ ಕಬಡ್ಡಿ ಕಪ್ ನಲ್ಲಿ ಅಂತಾರಾಷ್ಟ್ರೀಯ ಕಬ್ಬಡಿ ಆಟಗಾರ ಸಂದೀಪ್ ನಂಗಲ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಆತನ ತಲೆ ಮತ್ತು ಎದೆಯ ಮೇಲೆ ಸುಮಾರು 20 ಸುತ್ತು ಗುಂಡು ಹಾರಿಸಲಾಗಿದೆ ಎಂದು ತಿಳಿದು ಬಂದಿದೆ.
ಜಲಂಧರ್(ಗ್ರಾಮೀಣ) ಉಪ ಪೊಲೀಸ್ ವರಿಷ್ಠಾಧಿಕಾರಿ(ನಾಕೋಡರ್) ಲಖ್ವಿಂದರ್ ಸಿಂಗ್ ವರದಿಯನ್ನು ದೃಢಪಡಿಸಿದ್ದಾರೆ. ಕಬಡ್ಡಿ ಆಟಗಾರನ ಮೇಲೆ ಎಂಟರಿಂದ ಹತ್ತು ಗುಂಡುಗಳನ್ನು ಹಾರಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
ದೂರದಿಂದ ಸರಣಿ ಬುಲೆಟ್ ಗಳು ಹಾರುತ್ತಿದ್ದಂತೆ ಆತಂಕಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪಂದ್ಯಾವಳಿಯಲ್ಲಿದ್ದ ಪ್ರೇಕ್ಷಕರು ಸ್ಥಳದಿಂದ ಓಡಿಹೋಗುತ್ತಿರುವ ದೃಶ್ಯ ಕಂಡುಬಂತು.
ಸಂದೀಪ್ ಒಂದು ದಶಕಕ್ಕೂ ಹೆಚ್ಚು ಕಾಲ ಕಬಡ್ಡಿ ಜಗತ್ತನ್ನು ಆಳಿದ್ದಾರೆ. ಪಂಜಾಬ್ ಹೊರತುಪಡಿಸಿ ಕೆನಡಾ, ಯುಎಸ್ಎ, ಯುಕೆಗಳಲ್ಲಿ ಉತ್ತಮವಾಗಿ ಆಡಿದರು. ಅವರು ಭಾರತೀಯ ಕಬ್ಬಡಿ ಸ್ಪರ್ಧಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಖ್ಯಾತಿ ಗಳಿಸಿದರು. ಅವರನ್ನು ಡೈಮಂಡ್ ಎಂದು ಕರೆಯಲಾಗುತ್ತಿತ್ತು.