ವಿಶ್ವ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ ಒಂದರಲ್ಲಿ ಭಾಗವಹಿಸಿದ್ದ ರಷ್ಯಾದ ಪ್ರಖ್ಯಾತ ಪವರ್ ಲಿಫ್ಟರ್ ಅಲೆಕ್ಸಾಂಡರ್ ಸೆಡಿಖ್ ಅವರ ಎರಡೂ ಮೊಣಕಾಲುಗಳು ಮುರಿದು ತೀವ್ರವಾಗಿ ಘಾಸಿಗೊಂಡಿದ್ದಾರೆ.
ವರ್ಡ್ಲ್ ರಾ ಪವರ್ ಲಿಫ್ಟಿಂಗ್ ಫೆಡರೇಶನ್ (ಡಬ್ಲುಪಿಆರ್ಎಫ್) ನಿಂದ ರಷ್ಯಾದ ಮಾಸ್ಕೊ ಪ್ರಾಂತ್ಯದ ಡೊಲೊಗ್ಪ್ರುಡ್ನಿ ನಗರದಲ್ಲಿ ಆಯೋಜಿಸಿದ್ದ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ 2020 ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಡಬ್ಲುಪಿಆರ್ಎಫ್ ಈ ಸಂಬಂಧದ ಫೇಸ್ಬುಕ್ನಲ್ಲಿ ಘಟನೆಯ ವಿಡಿಯೋವನ್ನು ಪೋಸ್ಟ್ ಮಾಡಿದೆ. ಅದರಲ್ಲಿ ಅಲೆಕ್ಸಾಂಡರ್ ಅವರು 882 ಪೌಂಡ್ ಭಾರ ಎತ್ತುವ ಸಂದರ್ಭದಲ್ಲಿ ಭಾರಿ ನೋವಿನಿಂದ ಕುಸಿದು ಬೀಳುತ್ತಾರೆ.
ಅವರಿಗೆ ನಿರಂತರ 6 ತಾಸುಗಳ ಕಾಲ ತುರ್ತು ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ರಷ್ಯಾದ ನ್ಯೂಸ್ ಏಜೆನ್ಸಿ ಆರ್ಐಎ ನೋವಿಸ್ಟ್ ವರದಿ ಮಾಡಿದೆ.
‘ತಪ್ಪಿ ಹೋಗಿದ್ದ ಮೊಣಕಾಲಿನ ಚಿಪ್ಪುಗಳನ್ನು ಮತ್ತೆ ಸರಿಯಾಗಿ ಜೋಡಿಸಲಾಗಿದೆ. ಎರಡು ಸ್ಟಿಚ್ ಹಾಕಿ ಅದನ್ನು ಕೂರಿಸಲಾಗಿದೆ’ ಎಂದು ವೈದ್ಯರು ತಿಳಿಸಿದ್ದಾರೆ.