ನವದೆಹಲಿ: ಕನ್ನಡಿಗ ಕೆ.ಎಲ್. ರಾಹುಲ್ ಅವರಿಗೆ ಐಪಿಎಲ್ ನಲ್ಲಿ ಬಂಪರ್ ಆಫರ್ ಒಲಿಯುವ ಸಾಧ್ಯತೆ ಇದೆ. ಐಪಿಎಲ್ ನಲ್ಲಿ ಅತ್ಯಂತ ದುಬಾರಿ ಆಟಗಾರನಾಗಿ ಕೆ.ಎಲ್. ರಾಹುಲ್ ಹೊರ ಹೊಮ್ಮುವ ಸಾಧ್ಯತೆ ದಟ್ಟವಾಗಿದೆ.
ಐಪಿಎಲ್ ನ ಹೊಸ ತಂಡ ಲಕ್ನೋ ತಂಡದ ನಾಯಕನಾಗಿ ಆಯ್ಕೆಯಾಗುವ ರಾಹುಲ್ ಅವರಿಗೆ 20 ಕೋಟಿ ರೂಪಾಯಿ ಬಂಪರ್ ಆಫರ್ ನೀಡಲಾಗಿದೆ. 7 ಸಾವಿರ ಕೋಟಿ ರೂ.ಗೂ ಅಧಿಕ ಹಣ ನೀಡಿ ಲಕ್ನೋ ತಂಡ ಖರೀದಿಸಿದ ಉದ್ಯಮಿ ಸಂಜೀವ್ ಗೋಯೆಂಕಾ ಪಂಜಾಬ್ ಕಿಂಗ್ಸ್ ತಂಡದ ನಾಯಕ ರಾಹುಲ್ ಅವರನ್ನು ಸೇರ್ಪಡೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ದುಬಾರಿ ಆಟಗಾರರಾಗಿದ್ದಾರೆ. ಅವರು ಯಾವತ್ತೂ ಹರಾಜಿನಲ್ಲಿ ಪಾಲ್ಗೊಂಡಿಲ್ಲ. ಆರ್ಸಿಬಿ ಅವರಿಗೆ 17 ಕೋಟಿ ರೂಪಾಯಿ ಪಾವತಿಸಿದೆ. ಹರಾಜಿಲ್ಲದೆ 20 ಕೋಟಿ ರೂಪಾಯಿಗೆ ಕೆ.ಎಲ್. ರಾಹುಲ್ ಅವರನ್ನು ಖರೀದಿಸಲು ಲಖ್ನೋ ತಂಡ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ.