ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ 8 ರನ್ ಗೆಲುವು ಕಂಡಿದೆ. ಇದರೊಂದಿಗೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು 2 -0 ಅಂತರದಿಂದ ಟೀಂ ಇಂಡಿಯಾ ಗೆದ್ದಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರವಾಗಿ ರೋಹಿತ್ ಶರ್ಮ 19, ಇಶಾನ್ ಕಿಶನ್ 2, ವಿರಾಟ್ ಕೊಹ್ಲಿ 52, ಸೂರ್ಯಕುಮಾರ್ 8, ರಿಷಬ್ ಪಂತ್ ಅಜೇಯ 52, ವೆಂಕಟೇಶ್ ಅಯ್ಯರ್ 33 ರನ್ ಗಳಿಸಿದರು. ವಿಂಡೀಸ್ ಪರವಾಗಿ ರಾಸ್ಟನ್ ಚೇಸ್ 3 ವಿಕೆಟ್ ಪಡೆದು ಗಮನಸೆಳೆದರು.
ಗೆಲುವಿನ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 20 ಓವರುಗಳಲ್ಲಿ 3 ವಿಕೆಟ್ 178 ರನ್ ಗಳಿಸಿತು. ಬ್ರೆಂಡನ್ ಕಿಂಗ್ 22, ಪೂರನ್ 62, ರೊವ್ ಮನ್ ಪೊವೆಲ್ ಅಜೇಯ 68 ರನ್ ಗಳಿಸಿದರು.
100 ನೇ ಟಿ20 ಗೆಲುವು
ಟೀಂ ಇಂಡಿಯಾಗೆ ಐತಿಹಾಸಿಕ 100ನೇ ಟಿ20 ಗೆಲುವು ಇದಾಗಿದೆ. ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಭಾರತ 100 ಪಂದ್ಯಗಳಲ್ಲಿ ಜಯಗಳಿಸಿದ ಎರಡನೇ ತಂಡವಾಗಿದೆ. 155 ಪಂದ್ಯಗಳಲ್ಲಿ 51 ರಲ್ಲಿ ಸೋಲು ಕಂಡಿದೆ. 4 ಪಂದ್ಯ ಫಲಿತಾಂಶ ಬಂದಿಲ್ಲ. 100 ಗೆಲುವು ಕಂಡ ಮೊದಲ ತಂಡ ಪಾಕಿಸ್ತಾನ 189 ಪಂದ್ಯಗಳನ್ನಾಡಿದ್ದು, 118 ರಲ್ಲಿ ಗೆಲುವು ಕಂಡಿದೆ.
ನಾಯಕನಾಗಿ ರೋಹಿತ್ ಹ್ಯಾಟ್ರಿಕ್ ಸರಣಿ
ರೋಹಿತ್ ಶರ್ಮಾ ಟೀಂ ಇಂಡಿಯಾ ಪೂರ್ಣಾವಧಿ ನಾಯಕನಾದ ನಂತರ ಹ್ಯಾಟ್ರಿಕ್ ಸರಣಿ ಗೆಲುವು ಕಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ, ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ ಮತ್ತು ಟಿ20 ಸರಣಿ ಜಯಿಸಿ ಹ್ಯಾಟ್ರಿಕ್ ಸರಣಿ ಜಯ ದಾಖಲಿಸಿದ್ದಾರೆ.