
ಪಲ್ಲೆಕಲೆ: ಏಷ್ಯಾ ಕಪ್ ಏಕದಿನ ಟೂರ್ನಿಯ ಸೂಪರ್ 4 ಹಂತಕ್ಕೆ ಎ ಗುಂಪಿನಿಂದ ಎರಡನೇ ತಂಡವಾಗಿ ಭಾರತ ಪ್ರವೇಶ ಪಡೆದುಕೊಂಡಿದೆ.
ಸೋಮವಾರ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತ ದಕ್ವರ್ಥ್ ಲೂಯಿಸ್ ನಿಯಮದ ಅನ್ವಯ 10 ವಿಕೆಟ್ ಜಯ ಸಾಧಿಸಿದೆ. ನೇಪಾಳ 48.2 ಓವರ್ ಗಳಲ್ಲಿ 230 ರನ್ ಗೆ ಆಲ್ ಔಟ್ ಆಯಿತು. ಸುಲಭ ಗೆಲುವಿನ ಗುರಿ ಬೆನ್ನತ್ತಿದ ಭಾರತ 2.1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 17 ರನ್ ಗಳಿಸಿದಾಗ ಭಾರಿ ಮಳೆಯಾಗಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಆಟ ಸ್ಥಗಿತಗೊಂಡಿತು. ಡಕ್ವರ್ಥ್ ಲೂಯಿಸ್ ನಿಯಮದನ್ವಯ ಭಾರತಕ್ಕೆ 23 ಓವರ್ ಗಳಲ್ಲಿ 145 ರನ್ ಗುರಿ ನೀಡಲಾಯಿತು. ಇನ್ನೂ 2.5 ಓವರ್ ಗಳು ಬಾಕಿ ಇರುವಂತೆಯೇ ಭಾರತ ವಿಕೆಟ್ ನಷ್ಟವಿಲ್ಲದೆ 20.1 ಓವರ್ ಗಳಲ್ಲಿ 147 ರನ್ ಗಳಿಸಿತು.
ರೋಹಿತ್ ಶರ್ಮಾ 59 ಎಸೆತಗಳಲ್ಲಿ 6 ಬೌಂಡರಿ, 1ಸಿಕ್ಸರ್ ಸಹಿತ ಅಜೇಯ 74ರನ್ ಗಳಿಸಿದರು. ಶುಭಮನ್ ಗಿಲ್ 62 ಎಸೆತಗಳಲ್ಲಿ 8 ಬೌಂಡರಿ, ಒಂದು ಸಿಕ್ಸರ್ ಸಹಿತ ಅಜೇಯ 67 ರನ್ ಗಳಿಸಿದರು.
ಸೂಪರ್ -4 ಹಂತದಲ್ಲಿ ಭಾರತ ಸೆಪ್ಟಂಬರ್ 10 ರಂದು ಮೊದಲ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಡಲಿದೆ. ಗುಂಪು ಹಂತದ ಪಂದ್ಯ ಮಳೆಯಿಂದ ರದ್ದಾಗಿತ್ತು. ಸೆಪ್ಟಂಬರ್ 10ರಂದು ಭಾರತ ಮತ್ತು ಪಾಕಿಸ್ತಾನ ಸೂಪರ್ -4 ಹಂತದಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿವೆ.