ನವದೆಹಲಿ: ಕಿವೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಎರಡನೇ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ತಂಡವನ್ನು ಸೇರಿಕೊಳ್ಳಲಿದ್ದು, 2 ನೇ ಪಂದ್ಯದಲ್ಲಿ ಅವರೇ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ.
ನ್ಯೂಜಿಲೆಂಡ್ ವಿರುದ್ಧ ಎರಡು ಟಿ20 ಮತ್ತು ಎರಡು ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಮೊದಲ ಟೆಸ್ಟ್ ಪಂದ್ಯ ಮತ್ತು 2 ಟಿ20 ಪಂದ್ಯಗಳಿಗೆ ರೋಹಿತ್ ಶರ್ಮಾ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ನವೆಂಬರ್ 17 ರಂದು ತವರಿನಲ್ಲಿ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಟಿ20 ವಿಶ್ವಕಪ್ ನಂತರ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಮತ್ತು ಟಿ20 ಸರಣಿ ನಡೆಯಲಿದೆ.
ರವಿಶಾಸ್ತ್ರಿ ಅವರ ಅಧಿಕಾರಾವಧಿ ಮುಗಿದ ನಂತರ ಮುಖ್ಯ ಕೋಚ್ ಆಗಿ ಅಧಿಕಾರ ಸ್ವೀಕರಿಸಲಿರುವ ರಾಹುಲ್ ದ್ರಾವಿಡ್ ಅವರೊಂದಿಗೆ ರೋಹಿತ್ ಶರ್ಮಾ ಕೈ ಜೋಡಿಸಲಿದ್ದಾರೆ. ವಿರಾಟ್ ಕೊಹ್ಲಿ ಅವರು ಭಾರತದ ಟಿ20 ತಂಡದ ನಾಯಕರಾಗಿ ತಮ್ಮ ನಿನ್ನೆ ಕೊನೆ ಪಂದ್ಯವಾಡಿದ್ದಾರೆ.
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ, ನವೆಂಬರ್ 25 ರಿಂದ ಕಾನ್ಪುರದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ನಲ್ಲಿ ರೋಹಿತ್ ಶರ್ಮಾ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ. ಅಜಿಂಕ್ಯ ರಹಾನೆ ಅವರು ಟೆಸ್ಟ್ ತಂಡದ ಉಪನಾಯಕರಾಗಿ ಮುಂದುವರಿಯಲು ಸಿದ್ಧರಾಗಿದ್ದಾರೆ. 2 ನೇ ಟೆಸ್ಟ್ ಪಂದ್ಯ ಡಿಸೆಂಬರ್ 3 ರಿಂದ ಮುಂಬೈನಲ್ಲಿ ನಡೆಯಲಿದ್ದು, ಕೊಹ್ಲಿ ತಂಡವನ್ನು ಸೇರುವ ನಿರೀಕ್ಷೆಯಿದೆ.