ಭಾರತದ ವಿಕೆಟ್ ಕೀಪರ್ ರಿಷಬ್ ಪಂತ್ ತಮ್ಮ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಚೇತರಿಕೆಯ ಹಂತ ಹಾಗೂ ಮುಂಬರುವ ಸವಾಲುಗಳನ್ನು ಎದುರು ನೋಡುತ್ತಿರುವುದಾಗಿ ಘೋಷಿಸಿದ್ದಾರೆ.
ಡಿಸೆಂಬರ್ 30 ರಂದು ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಪಂತ್ ಭೀಕರ ಕಾರ್ ಅಪಘಾತದಲ್ಲಿ ಗಾಯಗೊಂಡಿದ್ದರು. ಅವರ ಕಾರ್ ವಾಹನ ಡಿವೈಡರ್ ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದ್ದು, ರಿಷಬ್ ಪಂತ್ ಸಾವಿನ ದವಡೆಯಿಂದ ಪಾರಾಗಿದ್ದರು.
ಪಂತ್ ಅವರ ಹಣೆಯ ಮೇಲೆ ಗಾಯ, ಬಲ ಮೊಣಕಾಲಿನ ಅಸ್ಥಿರಜ್ಜು ಹಾನಿ, ಬಲ ಮಣಿಕಟ್ಟು, ಪಾದ, ಪಾದದ ಬೆರಳಿಗೆ ಗಾಯವಾಗಿದೆ. ಅವರ ಬೆನ್ನಿನ ಮೇಲೆ ಚರ್ಮ ಹರಿದು ಗಾಯವಾಗಿದೆ. ಪಂತ್ ಅವರನ್ನು ಡೆಹ್ರಾಡೂನ್‌ನಿಂದ ಮುಂಬೈಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಅಪಘಾತದ ನಂತರ ತನಗೆ ದೊರೆತ ಎಲ್ಲಾ ಬೆಂಬಲ ಮತ್ತು ಶುಭ ಹಾರೈಕೆಗಳಿಗೆ ವಿನಮ್ರನಾಗಿದ್ದೇನೆ. ಕೃತಜ್ಞನಾಗಿದ್ದೇನೆ ಎಂದು ಪಂತ್ ಹೇಳಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಮತ್ತು ಚೇತರಿಕೆಯ ಹಾದಿ ಪ್ರಾರಂಭವಾಗಿದೆ. ಮುಂಬರುವ ಸವಾಲುಗಳಿಗೆ ತಾನು ಸಿದ್ಧನಿದ್ದೇನೆ ಮತ್ತು ಬೆಂಬಲಕ್ಕಾಗಿ ಬಿಸಿಸಿಐ ಪದಾಧಿಕಾರಿಗಳಿಗೆ, ಸರ್ಕಾರಿ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.