ಡಿಸೆಂಬರ್ 30 ರಂದು ಸಂಭವಿಸಿದ ಭೀಕರ ಕಾರ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ತಮ್ಮ ಎಡ ಹುಬ್ಬಿನ ಮೇಲೆ ಪ್ಲಾಸ್ಟಿಕ್ ಸರ್ಜರಿ ಮಾಡಿದ ನಂತರ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಅವರು ಚೇತರಿಸಿಕೊಳ್ಳಲು 3-6 ತಿಂಗಳುಗಳನ್ನು ತೆಗೆದುಕೊಳ್ಳಬಹುದು, ಎಲ್ಲಾ ಸಾಧ್ಯತೆಗಳಲ್ಲಿ, ಅವರು ಗಾಯಗಳಿಂದಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಹೊಸ ವರ್ಷಕ್ಕೆ ತನ್ನ ತಾಯಿಗೆ ಸರ್ ಪ್ರೈಸ್ ನೀಡಲು ಪಂತ್ ದೆಹಲಿಯಿಂದ ರೂರ್ಕಿಗೆ ಕಾರ್ ಚಾಲನೆ ಮಾಡಿಕೊಂಡು ತೆರಳುವಾಗ ಅಪಘಾತ ಸಂಭವಿಸಿತ್ತು. ಕಾರ್ ಸಂಪೂರ್ಣವಾಗಿ ಸುಟ್ಟುಹೋಗುವ ನಿಮಿಷಗಳ ಮೊದಲು ಅವರನ್ನು ರಕ್ಷಿಸಲಾಗಿತ್ತು.
ಅವರ ಹಣೆಯ ಮೇಲಿರುವ ಗಾಯಗಳಲ್ಲದೆ, ಅವರ ಬೆನ್ನು ಮತ್ತು ಮೊಣಕಾಲಿಗೆ ಗಂಭೀರವಾಗಿ ಗಾಯವಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಉತ್ತಮ ವೈದ್ಯಕೀಯ ಸೇವೆ ಭರವಸೆ ನೀಡಿದೆ. ಪಂತ್ ಅವರು ಪ್ರಸ್ತುತ ಡೆಹ್ರಾಡೂನ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಪ್ರಯಾಣಿಸಲು ಸಾಕಷ್ಟು ಫಿಟ್ ಆಗಿದ್ದಾರೆಂಬುದು ಖಚಿತವಾದರೆ ಅವರನ್ನು ಮುಂಬೈಗೆ ಸ್ಥಳಾಂತರಿಸಬಹುದು, ಅಲ್ಲಿ ಅವರು ಬಿಸಿಸಿಐನ ಎಂಪಾನೆಲ್ಡ್ ವೈದ್ಯ ದಿನ್ಶಾ ಪರ್ದಿವಾಲಾ ಅವರ ಮೇಲ್ವಿಚಾರಣೆಯಲ್ಲಿರುತ್ತಾರೆ. ಇದು ಸಾಧ್ಯವಾಗದಿದ್ದರೆ ಅವರನ್ನು ದೆಹಲಿಗೆ ಏರ್ ಲಿಫ್ಟ್ ಮಾಡಲು ಚಿಂತನೆ ನಡೆದಿದೆ.
ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಶ್ಯಾಮ್ ಶರ್ಮಾ, ವೈದ್ಯರು ಅಲ್ಲಿನ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದು, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಪಂತ್ ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಪಂತ್ ಅವರನ್ನು ಭೇಟಿ ಮಾಡಲು ಯಾವುದೇ ವಿಐಪಿ, ಅಭಿಮಾನಿಗಳಿಗೆ ಅವಕಾಶ ನೀಡಬಾರದು. ಪಂತ್‌ಗೆ ಸೋಂಕು ತಗುಲುವ ಸಾಧ್ಯತೆಗಳಿರುವುದರಿಂದ ಅವರನ್ನು ಭೇಟಿ ಮಾಡುವುದಕ್ಕೆ ಅವಕಾಶ ನೀಡಬಾರದು ಎಂದು ಡಿಡಿಸಿಎ ನಿರ್ದೇಶಕರು ತಿಳಿಸಿದ್ದಾರೆ.