ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ವಿರಾಟ್ ಕೊಹ್ಲಿಗೆ ಶೋಕಾಸ್ ನೋಟಿಸ್ ಕಳುಹಿಸಲು ಸೌರವ್ ಗಂಗೂಲಿ ಬಯಸಿದ್ದರು ಎಂಬ ವರದಿಗಳು ಹೊರಬಂದ ಒಂದು ದಿನದ ನಂತರ, ಬಿಸಿಸಿಐ ಅಧ್ಯಕ್ಷರು ವರದಿಗಳು ‘ಸತ್ಯವಲ್ಲ’ ಎಂದು ಹೇಳಿದ್ದಾರೆ.
ಇತ್ತೀಚೆಗೆ ನೋಟಿಸ್ ವರದಿಗಳ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಗಂಗೂಲಿ, ಅದೆಲ್ಲ ನಿಜವಲ್ಲ ಎಂದು ಉತ್ತರಿಸಿದ್ದಾರೆ.
ಟೆಸ್ಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ODI ನಾಯಕತ್ವದಿಂದ ತೆಗೆದುಹಾಕಲು ಕಾರಣವಾದ ಘಟನೆಗಳ ಬಗ್ಗೆ ಮಾತನಾಡಿದ ನಂತರ ಗಂಗೂಲಿ ಅವರಿಗೆ ಶೋಕಾಸ್ ನೋಟಿಸ್ ಕಳುಹಿಸಲು ಬಯಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಕಳೆದ ವರ್ಷ, ಕೊಹ್ಲಿ T20I ನಾಯಕತ್ವದಿಂದ ಕೆಳಗಿಳಿದಿದ್ದರು. ವೈಟ್-ಬಾಲ್ ಸ್ವರೂಪಕ್ಕೆ ಒಬ್ಬ ನಾಯಕನನ್ನು ಆಯ್ಕೆದಾರರು ಬಯಸಿದ್ದರಿಂದ ಅವರನ್ನು ODI ನಾಯಕನ ಸ್ಥಾನದಿಂದ ತೆಗೆದುಹಾಕಲಾಯಿತು.
ಕೊಹ್ಲಿಯನ್ನು ODI ನಾಯಕತ್ವದಿಂದ ತೆಗೆದುಹಾಕಿದ ಒಂದು ದಿನದ ನಂತರ, BCCI ಅಧ್ಯಕ್ಷ ಗಂಗೂಲಿ, ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ವಿರಾಟ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದ್ದರು, ಅವರು T20I ನಾಯಕತ್ವ ಬಿಟ್ಟುಕೊಡದಂತೆ ವಿರಾಟ್ ವಿನಂತಿಸಿದ್ದಾರೆಂದು ಹೇಳಲಾಗಿತ್ತು.
ಭಾರತ ತಂಡ ದಕ್ಷಿಣ ಆಫ್ರಿಕಾಕ್ಕೆ ತೆರಳುವ ಮೊದಲು ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ, ಗಂಗೂಲಿ ವಿರುದ್ಧ ವ್ಯತಿರಿಕ್ತವಾಗಿ ಹೇಳಿಕೆ ನೀಡಿದ್ದರು. ಟಿ20 ನಾಯಕತ್ವವನ್ನು ತೊರೆಯುವಂತೆ ಎಂದಿಗೂ ಕೇಳಲಿಲ್ಲ ಎಂದು ತಿಳಿಸಿದ್ದರು.
ಆಗಲೇ ಕೊಹ್ಲಿ ವಿರುದ್ಧ ಕ್ರಮಕ್ಕೆ ಗಂಗೂಲಿ ಮುಂದಾಗಿದ್ದು, ಸೌತ್ ಆಫ್ರಿಕಾ ಪ್ರವಾಸದ ವೇಳೆ ತಂಡದ ಮೇಲೆ ಪರಿಣಾಮ ಬೀರುಬಹುದು ಎಂಬ ಕಾರಣಕ್ಕೆ ಬಿಸಿಸಿಐ ಪದಾಧಿಕಾರಿಗಳು ಗಂಗೂಲಿಗೆ ತಡೆ ಹಾಕಿದ್ದರು.
ಕಳೆದ ವಾರ ಕೊಹ್ಲಿ ಭಾರತದ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ದು, ಅವರ ನಿರ್ಧಾರ ವೈಯಕ್ತಿಕ ಎಂದು ಗಂಗೂಲಿ ಹೇಳಿದ್ದರು. ಈಗ ಕೊಹ್ಲಿ ವಿರುದ್ಧ ಗಂಗೂಲಿ ಶೋಕಾಸ್ ನೋಟಿಸ್ ನೀಡಲಿದ್ದಾರೆ ಎಂಬ ವದಂತಿ ಹರಡಿದ್ದು, ಇದನ್ನು ಗಂಗೂಲಿ ಅಲ್ಲಗಳೆದಿದ್ದಾರೆ.