ಭಾರತ-ಇಂಗ್ಲೆಂಡ್ ಮಧ್ಯೆ ಎರಡನೇ ಟೆಸ್ಟ್ ಪಂದ್ಯ ಚೆನ್ನೈನಲ್ಲಿ ನಡೆಯುತ್ತಿದೆ. ರವಿಚಂದ್ರನ್ ಅಶ್ವಿನ್ ಆಲ್ರೌಂಡ್ ಪ್ರದರ್ಶನ ತೋರಿದ್ದು, ಟೀಂ ಇಂಡಿಯಾ ಸ್ಕೋರ್ ಬಲಪಡಿಸಿದ್ದಾರೆ. ಪಂದ್ಯದ ಎರಡನೇ ದಿನ 5 ವಿಕೆಟ್ ಪಡೆದ ಅಶ್ವಿನ್, ಮೂರನೇ ದಿನ ಉತ್ತಮ ಬ್ಯಾಟಿಂಗ್ ಮಾಡಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಸಾಥ್ ನೀಡಿದ ಅಶ್ವಿನ್, ಹಲವಾರು ದಾಖಲೆಗಳನ್ನು ಮಾಡಿದ್ದಾರೆ.
ಅಶ್ವಿನ್ 24 ಟೆಸ್ಟ್ ಮತ್ತು 3 ವರ್ಷಗಳ ನಂತರ ಅರ್ಧಶತಕ ಸಿಡಿಸಿದ್ದಾರೆ. ಇದಕ್ಕೂ ಮೊದಲು ಆಗಸ್ಟ್ 2017 ರಲ್ಲಿ ಶ್ರೀಲಂಕಾ ವಿರುದ್ಧದ ಕೊಲಂಬೊ ಟೆಸ್ಟ್ ನಲ್ಲಿ ಅಶ್ವಿನ್ ಅರ್ಧಶತಕ ಬಾರಿಸಿದ್ದರು. ತವರು ನೆಲದಲ್ಲಿ 5 ವರ್ಷಗಳ ನಂತರ 50 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಕೊನೆಯ ಬಾರಿ ಅವರು ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಅರ್ಧಶತಕ ಕಲೆ ಹಾಕಿದ್ದರು.
ಇಷ್ಟೇ ಅಲ್ಲದೆ ಚೆನ್ನೈನಲ್ಲಿ ನಡೆದ ಒಂದೇ ಟೆಸ್ಟ್ ಪಂದ್ಯದಲ್ಲಿ 50ಕ್ಕಿಂತ ಹೆಚ್ಚು ರನ್ ಗಳಿಸಿ, ಐದು ವಿಕೆಟ್ ಪಡೆದ ಆಲ್ರೌಂಡರ್ ಎಂಬ ಹೆಗ್ಗಳಿಕೆಗೆ ಅಶ್ವಿನ್ ಪಾತ್ರರಾಗಿದ್ದಾರೆ. ಅಶ್ವಿನ್ ಇದುವರೆಗೆ 6 ಬಾರಿ ಈ ದಾಖಲೆ ಮಾಡಿದ್ದಾರೆ. ಈ ವಿಷ್ಯದಲ್ಲಿ ಅಶ್ವಿನ್, ಭಾರತದ ಮಾಜಿ ನಾಯಕ ಕಪಿಲ್ ದೇವ್ ಗಿಂತ ಮುಂದಿದ್ದಾರೆ. ಒಟ್ಟಾರೆ ಟೆಸ್ಟ್ ದಾಖಲೆಯ ಬಗ್ಗೆ ಹೇಳುವುದಾದ್ರೆ ಅಶ್ವಿನ್ ನ್ಯೂಜಿಲೆಂಡ್‌ನ ಮಾಜಿ ಆಲ್‌ರೌಂಡರ್ ರಿಚರ್ಡ್ ಹೆಡ್ಲಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್ ಇಯಾನ್ ಬೋಥಮ್ ಮತ್ತು ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್-ಉಲ್-ಹಸನ್ ಎರಡನೇ ಸ್ಥಾನದಲ್ಲಿದ್ದಾರೆ.