ಕೊಲ್ಕತ್ತಾ: ಚೊಚ್ಚಲ ಪ್ರಥಮ ದರ್ಜೆ ಪಂದ್ಯದಲ್ಲೇ ತ್ರಿಶತಕ ಸಿಡಿಸುವ ಮೂಲಕ ಬಿಹಾರದ ಯುವ ಆಟಗಾರ ಶಕೀಬುಲ್ ಗನಿ ವಿಶ್ವ ದಾಖಲೆ ಬರೆದಿದ್ದಾರೆ.
ಬಿಹಾರದ 22 ವರ್ಷದ ಬ್ಯಾಟರ್ ಶಕೀಬುಲ್ ಗನಿ ಚೊಚ್ಚಲ ಪ್ರಥಮ ದರ್ಜೆ ಪಂದ್ಯದಲ್ಲೇ 341 ರನ್ ಬಾರಿಸಿದ್ದಾರೆ. 405 ಎಸೆತಗಳನ್ನು ಎದುರಿಸಿದ ಗನಿ 341 ರನ್ ಸಿಡಿಸಿದ್ದು, ಪ್ರಥಮ ದರ್ಜೆ ಪಾದರ್ಪಣೆ ಪಂದ್ಯದಲ್ಲಿ ತ್ರಿಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮೊದಲ ಪ್ರಥಮ ದರ್ಜೆ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಮಧ್ಯಪ್ರದೇಶದ ಅಜಯ್ ರೊಹೆರಾ ಅವರ ಹೆಸರಲ್ಲಿತ್ತು. ಅಜಯ್ 2018 -19 ರಲ್ಲಿ ಹೈದರಾಬಾದ್ ವಿರುದ್ಧ 267 ರನ್ ಸಿಡಿಸಿ ದಾಖಲೆ ಬರೆದಿದ್ದರು. ಅವರ ದಾಖಲೆ ಹಿಂದಿಕ್ಕಿದ ಬಿಹಾರದ ಗನಿ ಮಿಜೊರಾಂ ವಿರುದ್ಧ ನಡೆದ ರಣಜಿ ಟ್ರೋಫಿ ಪ್ಲೇಟ್ ಗುಂಪಿನ ಪಂದ್ಯದಲ್ಲಿ 341 ರನ್ ಗಳಿಸಿ ವಿಶ್ವದಾಖಲೆ ಬರೆದಿದ್ದಾರೆ. ಬಾಬುಲ್ ಕುಮಾರ್(229 ರನ್) ಅವರೊಂದಿಗೆ ಗನಿ 4 ನೇ ವಿಕೆಟ್ ಜೊತೆಯಾಟದಲ್ಲಿ 538 ರನ್ ಗಳಿಸಿದ್ದಾರೆ.