ನವದೆಹಲಿ: ಭಾರತ ಕ್ರಿಕೆಟ್ ತಂಡದ ಪ್ರಧಾನ ತರಬೇತುದಾರ ರಾಹುಲ್ ದ್ರಾವಿಡ್ ಅವರ ಅವಧಿ ಮುಕ್ತಾಯವಾಗಿದ್ದು, ಅವರನ್ನು ಮುಂದುವರೆಸುವ ಕುರಿತು ಬಿಸಿಸಿಐ ಇನ್ನು ತೀರ್ಮಾನ ಕೈಗೊಂಡಿಲ್ಲ. ದ್ರಾವಿಡ್ ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್ ನೇಮಕವಾಗಲಿದ್ದಾರೆ ಎಂದು ಹೇಳಲಾಗಿದೆ.
ರಾಹುಲ್ ದ್ರಾವಿಡ್ ಅವರ ಎರಡು ವರ್ಷಗಳ ಒಪ್ಪಂದ 2023ರ ವಿಶ್ವಕಪ್ ನೊಂದಿಗೆ ಮುಕ್ತಾಯವಾಗಿದೆ. ಟೀಂ ಇಂಡಿಯಾ ಫೈನಲ್ ಪಂದ್ಯದಲ್ಲಿ ಪರಾಭವಗೊಂಡ ಹಿನ್ನೆಲೆಯಲ್ಲಿ ಮುಖ್ಯ ಕೋಚ್ ಸ್ಥಾನದಲ್ಲಿ ರಾಹುಲ್ ದ್ರಾವಿಡ್ ಮುಂದುವರೆಯದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ರಾಹುಲ್ ದ್ರಾವಿಡ್ ಅವರ ಸಮಕಾಲೀನ ಆಟಗಾರ ವಿವಿಎಸ್ ಲಕ್ಷ್ಮಣ್ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗುವ ಸಾಧ್ಯತೆ ಇದೆ. ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾಗವಹಿಸಿರುವ ಎರಡನೇ ಶ್ರೇಣಿಯ ಭಾರತ ತಂಡದ ಮುಖ್ಯ ಕೋಚ್ ಆಗಿ ಲಕ್ಷ್ಮಣ್ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಬಿಸಿಸಿಐ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರು ಆಗಿರುವ ವಿವಿಎಸ್ ಲಕ್ಷ್ಮಣ್ ಕೋಚ್ ಹುದ್ದೆಗೆ ಆಸಕ್ತಿ ತೋರಿದ್ದು, ಅವರನ್ನು ಆಯ್ಕೆ ಮಾಡುವ ಕುರಿತು ಚಿಂತನೆ ನಡೆದಿದೆ ಎನ್ನಲಾಗಿದೆ.