ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗಳಿಸಿದ ಪಿ.ವಿ. ಸಿಂಧು ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಸಿಂಧು ಅವರನ್ನು ಅಭಿನಂದಿಸಿದ್ದು, ಪಿ.ವಿ. ಸಿಂಧು ಎರಡು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗಳಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಸ್ಥಿರತೆ, ಸಮರ್ಪಣೆ ಮನೋಭಾವದಿಂದ ಶ್ರೇಷ್ಠ ಪ್ರದರ್ಶನ ತೋರಿ ಭಾರತಕ್ಕೆ ಕೀರ್ತಿ ತಂದ ಅವರಿಗೆ ಅಭಿನಂದನೆಗಳು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಿಂಧು ಅವರನ್ನು ಅಭಿನಂದಿಸಿ, ಉತ್ತಮ ಪ್ರದರ್ಶನ ನೀಡಿದ ಪಿ.ವಿ. ಸಿಂಧು ಭಾರತದ ಹೆಮ್ಮೆಯಾಗಿದ್ದು, ನಮ್ಮ ಅತ್ಯುತ್ತಮ ಒಲಿಂಪಿಯನ್ ಗಳಲ್ಲಿ ಒಬ್ಬರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು, ಆಟದಲ್ಲಿ ನೀವು ಪ್ರಾಬಲ್ಯ ಸಾಧಿಸಿದ್ದೀರಿ. ಇತಿಹಾಸ ನಿರ್ಮಿಸಿದ್ದೀರಿ. ಎರಡು ಬಾರಿ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತರಾದ ನಿಮಗೆ ಅಭಿನಂದನೆಗಳು. ನಿಮ್ಮ ಬರುವಿಕೆಗಾಗಿ ದೇಶ ಕಾಯುತ್ತಿದೆ. ನಿಮ್ಮ ಸಾಧನೆ ಬಗ್ಗೆ ಭಾರತ ಹೆಮ್ಮೆ ಪಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಂಧು ಅವರನ್ನು ಅಭಿನಂದಿಸಿದ್ದಾರೆ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಚೀನಾ ಆಟಗಾರ್ತಿಯನ್ನು ಮಣಿಸಿದ ಸಿಂಧುಗೆ ಅಭಿನಂದನೆಗಳು ಎಂದು ಸಿಎಂ ಟ್ವೀಟ್ ಮಾಡಿದ್ದಾರೆ. ಹೀಗೆ ಅನೇಕ ಗಣ್ಯರು ಸಿಂಧುಗೆ ಅಭಿನಂದಿಸಿದ್ದಾರೆ.
ಭಾರತದ ಸ್ಟಾರ್ ಷಟ್ಲರ್ ಪಿ.ವಿ. ಸಿಂಧು ಟೊಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಚೀನಾದ ಹೀ ಬಿಂಗ್ಜಿಯಾವೊ ಅವರನ್ನು 21- 13, 21-15 ಅಂತರದಿಂದ ಸೋಲಿಸಿದ ಸಿಂಧು ಕಂಚಿನ ಪದಕ ಗೆದ್ದರು.
ಇದರೊಂದಿಗೆ ಭಾರತ ಟೊಕಿಯೋ ಒಲಿಂಪಿಕ್ಸ್ ನಲ್ಲಿ ಎರಡು ಪದಕಗಳನ್ನು ಗಳಿಸಿದಂತಾಗಿದೆ. ವೇಟ್ ಲಿಫ್ಟರ್ ಮೀರಾಬಾಯಿ ಚಾನು ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಪಡೆದಿದ್ದರು.
ಸಿಂಧು ಅವರು ಸುಶೀಲ್ ಕುಮಾರ್ ನಂತರ 2 ವೈಯಕ್ತಿಕ ಒಲಿಂಪಿಕ್ ಪದಕಗಳನ್ನು ಗೆದ್ದ 2 ನೇ ಭಾರತೀಯರಾಗಿದ್ದಾರೆ. ಈ ಸಾಧನೆ ಮಾಡಿದ ದೇಶದ ಮೊದಲ ಮಹಿಳಾ ಕ್ರೀಡಾಪಟು. ಸಿಂಧು ಒಲಿಂಪಿಕ್ ಕ್ರೀಡಾಕೂಟದಲ್ಲಿ ಬ್ಯಾಕ್ ಟು ಬ್ಯಾಕ್ ಪದಕಗಳನ್ನು ಗೆದ್ದ 4 ನೇ ಮಹಿಳಾ ಸಿಂಗಲ್ಸ್ ಆಟಗಾರ್ತಿಯಾಗಿದ್ದಾರೆ.