ಇಸ್ಲಾಮಾಬಾದ್: ಮಹಿಳೆಯರು ಕ್ರೀಡೆಯಲ್ಲಿ ಎಷ್ಟೇ ಪ್ರಸಿದ್ಧರು, ಪ್ರವೀಣರಾಗಿರಲಿ. ಅವರು ಪುರುಷರಿಗಿಂತ ಕಡಿಮೆಯೇ ಎಂದು ಭಾವಿಸುವ ಪರಿಪಾಠವಿದೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಕ್ಯಾಪ್ಟನ್ ಮಿಥಾಲಿ ರಾಜ್ ಅವರಲ್ಲಿ ಕ್ರೀಡಾ ವರದಿಗಾರನೊಬ್ಬ “ಭಾರತೀಯ ಪುರುಷರ ತಂಡದಲ್ಲಿ ನಿಮ್ಮ ಇಷ್ಟದ ಕ್ರಿಕೆಟ್ ಆಟಗಾರ ಯಾರು…?” ಎಂದು ಪ್ರಶ್ನಿಸಿದ್ದ. ಅಂಥದ್ದೇ ಒಂದು ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಪಾಕಿಸ್ತಾನದ ಮೊದಲ ಮಹಿಳಾ ಕಾಮೆಂಟೇಟರ್ ಹಾಗೂ ಮಾಜಿ ಆಟಗಾರ್ತಿ ಮರಿನಾ ಇಕ್ಬಾಲ್ ಅವರ ಮೇಲೆ ಅಲ್ಲಿನ ಕ್ರೀಡಾ ವರದಿಗಾರನೊಬ್ಬ ಇಲ್ಲದ ಆರೋಪ ಹೊರಿಸಿ ಟೀಕೆ ಮಾಡಿದ್ದಾನೆ. ಆದರೆ, ಆತ ಮಾಡಿದ ಟ್ವಿಟರ್ ಪೋಸ್ಟ್ ಗೆ ಕಮೆಂಟೇಟರ್ ಸರಿಯಾಗಿ ತಿರುಗೇಟು ನೀಡಿದ್ದಾರೆ.
ಖಾದಿರ್ ಕ್ವಾಜಾ ಎಂಬ ಕ್ರೀಡಾ ವರದಿಗಾರ ಮರಿನಾ ಅವರಿರುವ ಎರಡು ಫೋಟೋ ಟ್ವೀಟ್ ಮಾಡಿದ್ದು, ಒಂದರಲ್ಲಿ ಮರಿನಾ ಅವರು ಕ್ರಿಕೆಟ್ ಚರ್ಚೆಯಲ್ಲಿ ತೊಡಗಿದ್ದರೆ. ಇನ್ನೊಂದು ಫೋಟೋದಲ್ಲಿ ಪಿಚ್ ವಿಶ್ಲೇಷಣೆ ಮಾಡುತ್ತಿದ್ದಾರೆ.
ಕ್ವಾಜಾ “ಮರಿನಾ ಹೈ ಹೀಲ್ಡ್ ಶೂ ಹಾಕಿಕೊಂಡು ಪಿಚ್ ಗೆ ಹೋಗಿದ್ದಾರೆ. ಇದು ಕಾನೂನುಬದ್ಧವೇ ಎಂಬ ನಿರ್ದೇಶನ ಬೇಕಿದೆ” ಎಂದು ಟ್ವೀಟ್ ಮಾಡಿದ್ದಾನೆ. ಮರಿನಾ ಅದಕ್ಕೆ ಪ್ರತಿಕ್ರಿಯಿಸಿದ್ದು, ತಾವು ಪಿಚ್ ನಲ್ಲಿ ಸಾದಾ ಶೂ ಹಾಕಿರುವ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.
“ಕ್ವಾಜಾ ಅರೆಬರೆ ಜ್ಞಾನ ಒಳ್ಳೆಯದಲ್ಲ. ನಾನು ಮಾಜಿ ಕ್ರಿಕೆಟ್ ಆಟಗಾರ್ತಿ, ನನಗೆ ಕ್ರಿಕೆಟ್ ಶಿಷ್ಟಾಚಾರಗಳ ಅರಿವಿದೆ. ನಾನು ಹೀಲ್ಡ್ ಶೂ ಹಾಕಿದ್ದು, ಪಿಚ್ ವಿಶ್ಲೇಷಣಾ ಪೂರ್ವ ಚರ್ಚೆಯಲ್ಲಿ ಮಾತ್ರ. ಹೀಲ್ಡ್ ಶೂ ಹಾಕಿ ಪಿಚ್ ಗೆ ಇಳಿದಿಲ್ಲ” ಎಂದು ಖಡಕ್ಕಾಗಿ ಉತ್ತರಿಸಿದ್ದಾರೆ.