
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ(ಪಿಸಿಬಿ) ಹೊಸ ಮುಖ್ಯಸ್ಥ ನಜಮ್ ಸೇಥಿ 2023 ರ ಏಕದಿನ ವಿಶ್ವಕಪ್‌ನಲ್ಲಿ ಆಡಲು ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಭಾರತಕ್ಕೆ ಕಳುಹಿಸುವ ತಮ್ಮ ದೇಶದ ನಿಲುವಿನ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಏಷ್ಯಾಕಪ್‌ಗಾಗಿ ಭಾರತವು ಪಾಕಿಸ್ತಾನಕ್ಕೆ ತೆರಳಲು ವಿಫಲವಾದರೆ 2023 ರ ಏಕದಿನ ವಿಶ್ವಕಪ್ ಅನ್ನು ಪಾಕಿಸ್ತಾನ ಬಹಿಷ್ಕರಿಸುವುದಾಗಿ ಪಿಸಿಬಿ ಮಾಜಿ ಮುಖ್ಯಸ್ಥ ರಮೀಜ್ ರಾಜಾ ಬೆದರಿಕೆ ಹಾಕಿದ್ದನ್ನು ನೆನಪಿಸಿಕೊಳ್ಳಬಹುದು.
ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರೂ ಆಗಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು 2023 ರ ಅಕ್ಟೋಬರ್‌ನಲ್ಲಿ ಏಷ್ಯಾ ಕಪ್‌ಗಾಗಿ ಭಾರತೀಯ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಹೇಳಿದ ನಂತರ ಪಿಸಿಬಿ ಮತ್ತು ಬಿಸಿಸಿಐ ನಡುವಿನ ಸಂಬಂಧಗಳು ಬಿಗಡಾಯಿಸಿವೆ.
2023ರ ODI ವಿಶ್ವಕಪ್‌ನಲ್ಲಿ ಭಾಗವಹಿಸಲು ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಕಳುಹಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುತ್ತದೆಯೇ ಹೊರತು PCB ಅಲ್ಲ ಎಂದು ಸೇಥಿ ಪ್ರತಿಪಾದಿಸಿದ್ದಾರೆ.
ಭಾರತಕ್ಕೆ ಹೋಗಬೇಡಿ ಎಂದು ಸರ್ಕಾರ ಹೇಳಿದರೆ ನಾವು ಹೋಗುವುದಿಲ್ಲ. ಪಾಕಿಸ್ತಾನ ಮತ್ತು ಭಾರತದ ಕ್ರಿಕೆಟ್ ಸಂಬಂಧ, ಪ್ರವಾಸ ಕೈಗೊಳ್ಳಬೇಕೆ ಎಂಬುದರ ಕುರಿತು ಸರ್ಕಾರದ ಮಟ್ಟದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಸೇಥಿ ಕರಾಚಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇವು ಕೇವಲ ಸರ್ಕಾರದ ಮಟ್ಟದಲ್ಲಿ ತೆಗೆದುಕೊಳ್ಳಲಾದ ನಿರ್ಧಾರವಾಗಿದ್ದು, PCB ಸ್ಪಷ್ಟತೆ ಮಾತ್ರ ಪಡೆಯಬಹುದು ಎಂದು ಅವರು ಹೇಳಿದ್ದಾರೆ.
2008ರಲ್ಲಿ ಭಾರತ ಕ್ರಿಕೆಟ್ ತಂಡ ಏಷ್ಯಾಕಪ್ ನಲ್ಲಿ ಆಡಲು ಪಾಕಿಸ್ತಾನಕ್ಕೆ ತೆರಳಿತ್ತು. 26/11ರ ಮುಂಬೈ ಭಯೋತ್ಪಾದನಾ ದಾಳಿಯ ನಂತರ ದ್ವಿಪಕ್ಷೀಯ ಸರಣಿಗಳು ಬಹುತೇಕ ಮುಗಿದ ಅಧ್ಯಾಯವಾಗಿದೆ.