ಮೆಲ್ಬರ್ನ್: ಟಿ20 ವಿಶ್ವಕಪ್ ಫೈನಲ್ ಪಂದ್ಯ ಇಂದು ನಡೆಯಲಿದ್ದು, ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಯಾರೇ ಗೆದ್ದರೂ ಎರಡನೇ ಬಾರಿ ಚಾಂಪಿಯನ್ ಆಗಲಿದ್ದಾರೆ.
ಕಳೆದ 7 ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಲಾ ಒಮ್ಮೆ ಜಯಗಳಿಸಿರುವ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು 2022ನೇ ಸಾಲಿನ ಚಾಂಪಿಯನ್ ಪಟ್ಟಕ್ಕಾಗಿ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಎರಡೂ ತಂಡಗಳು ಬಲಿಷ್ಠವಾಗಿದ್ದು ಬಾಬರ್ ಪಡೆಗೆ ಇತಿಹಾಸದ ಬೆಂಬಲವಿದ್ದರೆ, ಬಟ್ಲರ್ ಬಳಗ ಫಾರ್ಮ್ ಬಲ ಹೊಂದಿದೆ.
ಟಿ20ಯಲ್ಲಿ ಉಭಯ ತಂಡಗಳು ಒಟ್ಟು 28 ಬಾರಿ ಮುಖಾಮುಖಿಯಾಗಿದ್ದು, ಇಂಗ್ಲೆಂಡ್ 17 ಬಾರಿ, ಪಾಕಿಸ್ತಾನ 9 ಬಾರಿ ಜಯಗಳಿಸಿದೆ. ಒಂದು ಪಂದ್ಯ ಫಲಿತಾಂಶ ರಹಿತವಾಗಿದ್ದು, ಮತ್ತೊಂದು ಪಂದ್ಯ ಟೈ ಆಗಿದೆ.
ಟಿ20 ವಿಶ್ವಕಪ್ ಆರಂಭದ 2007 ರಲ್ಲಿ ಭಾರತ, 2009 ರಲ್ಲಿ ಪಾಕಿಸ್ತಾನ, 2010ರಲ್ಲಿ ಇಂಗ್ಲೆಂಡ್, 2012ರಲ್ಲಿ ವೆಸ್ಟ್ ಇಂಡೀಸ್, 2014ರಲ್ಲಿ ಶ್ರೀಲಂಕಾ, 2016ರಲ್ಲಿ ವೆಸ್ಟ್ ಇಂಡೀಸ್, 2021 ರಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿವೆ. ಈ ಬಾರಿ ಯಾವ ತಂಡ ಚಾಂಪಿಯನ್ ಆಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಭಾನುವಾರ ಮಧ್ಯಾಹ್ನ 1.30 ಕ್ಕೆ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ಆರಂಭವಾಗಲಿದ್ದು, ಭಾನುವಾರ ಮತ್ತು ಸೋಮವಾರ ಮೆಲ್ಬರ್ನ್ ಪ್ರದೇಶದಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಕೂಡ ಇದೆ.