ಹೈದರಾಬಾದ್: ಹಲವು ದಾಖಲೆಗಳಿಗೆ ಸಾಕ್ಷಿಯಾದ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಏಕದಿನ ಪಂದ್ಯದಲ್ಲಿ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡ ಶ್ರೀಲಂಕಾ ತಂಡವನ್ನು ಮಣಿಸಿದೆ.
ಹೈದರಾಬಾದ್ ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 344 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು. ಕುಶಾಲ್ ಮೆಂಡಿಸ್ 122, ಸಮರ ವಿಕ್ರಮ 108, ಪಾಥುಮ್ ನಿಸ್ಸಾಂಕ 51 ರನ್ ಗಳಿಸಿದರು. ಪಾಕ್ ಪರವಾಗಿ ಹಸನ್ ಅಲಿ 4, ಹ್ಯಾರಿಸ್ ರವೂಫ್ 2 ವಿಕೆಟ್ ಪಡೆದರು. 345 ರನ್ ಗಳ ಕಠಿಣ ಸವಾಲು ಬೆನ್ನತ್ತಿದ ಪಾಕಿಸ್ತಾನ ಇನ್ನೂ 10 ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್ ನಷ್ಟಕ್ಕೆ 348 ರನ್ ಗಳಿಸಿ ಆರು ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿದೆ.
ಬೃಹತ್ ಮತ್ತ ಇದ್ದರೂ ಕಳಪೆ ಫೀಲ್ಡಿಂಗ್ ಕಾರಣ ಶ್ರೀಲಂಕಾ ಸೋಲು ಕಂಡಿದೆ. ಪಾಕಿಸ್ತಾನ ಪರವಾಗಿ ಅಬ್ದುಲ್ಲಾ ಶಫೀಕ್ 113, ರಿಜ್ವಾನ್ ಅಜೇಯ 134 ಭರ್ಜರಿ ಶತಕ ಸಿಡಿಸಿದ್ದಾರೆ. ಲಂಕಾ ಪರ ದಿಲ್ಷಾನ್ ಎರಡು ವಿಕೆಟ್ ಪಡೆದರು.
ಶ್ರೀಲಂಕಾ 344 ರನ್ ಬೃಹತ್ ಮೊತ್ತ ಗಳಿಸಿದ್ದು, ಇದು ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ತಂಡವೊಂದು ದಾಖಲಿಸಿದ ಗರಿಷ್ಠ ಮೊತ್ತವಾಗಿದೆ. 2019ರಲ್ಲಿ ಭಾರತ ಐದು ವಿಕೆಟ್ ಗೆ 336 ರನ್ ಗಳಿಸಿದ್ದು ಇದುವರೆಗಿನ ಗರಿಷ್ಠ ಮೊತ್ತ ಆಗಿತ್ತು.