ಇಂಡಿಯನ್ ಪ್ರೀಮಿಯರ್ ಲೀಗ್ 14 ರ ಋತುವನ್ನು ಕೊರೊನಾ ಹಿನ್ನಲೆಯಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಮುಂದಿನ ತಿಂಗಳು ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯವನ್ನು ಆಡಲು ಭಾರತೀಯ ಆಟಗಾರರು ಇಂಗ್ಲೆಂಡ್‌ಗೆ ಹೋಗಬೇಕಾಗಿದೆ. ಅದಕ್ಕೂ ಮೊದಲು ಭಾರತೀಯ ಆಟಗಾರರು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲಿದ್ದಾರೆ. ಈ ಮಧ್ಯೆ ಭಾರತೀಯ ಆಟಗಾರರು ಇಂಗ್ಲೆಂಡ್‌ಗೆ ಹೋಗುವ ಮೊದಲು ಕೊರೊನಾ ವೈರಸ್ ಲಸಿಕೆ ಪಡೆಯಬೇಕೆಂಬ ಬಗ್ಗೆ ಚರ್ಚೆಯಾಗ್ತಿದೆ.
ವರದಿಯ ಪ್ರಕಾರ, ಭಾರತೀಯ ಆಟಗಾರರು ಬಹುಶಃ ಕೋವಿಶೀಲ್ಡ್ ತೆಗೆದುಕೊಳ್ಳಲಿದ್ದಾರೆ. ಭಾರತ ಸರ್ಕಾರವು ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಪ್ರಾರಂಭಿಸಿದೆ. ಈ ಕಾರಣದಿಂದಾಗಿ ಭಾರತೀಯ ಆಟಗಾರರು ಸಹ ಅದರ ವ್ಯಾಪ್ತಿಗೆ ಬಂದಿದ್ದಾರೆ. ಐಪಿಎಲ್ ಮಧ್ಯದಲ್ಲಿ ಭಾರತೀಯ ಆಟಗಾರರಿಗೆ ಲಸಿಕೆ ನೀಡಲಾಗುವುದು ಎಂದು ಮೊದಲೇ ಹೇಳಲಾಗಿತ್ತು. ಆದರೆ ಐಪಿಎಲ್ ಮುಂದೂಡಿದ್ದರಿಂದ ಲಸಿಕೆ ನೀಡುವುದು ಸುಲಭವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸೌರವ್ ಗಂಗೂಲಿ, ಈಗ ಆಟಗಾರರಿಗೆ ಅವಕಾಶವಿದೆ ಎಂದಿದ್ದರು. ಟೀಂ ಇಂಡಿಯಾ ಆಟಗಾರರಿಗೆ ಕೋವಿಶೀಲ್ಡ್ ಲಸಿಕೆ ತೆಗೆದುಕೊಳ್ಳುವಂತೆ ಸಲಹೆ ನೀಡಲಾಗ್ತಿದೆ. ಕೋವಿಶೀಲ್ಡ್ ಲಸಿಕೆ ಮೊದಲ ಡೋಸ್ ಭಾರತದಲ್ಲಿ ತೆಗೆದುಕೊಂಡಲ್ಲಿ ಎರಡನೇ ಡೋಸ್ ಇಂಗ್ಲೆಂಡ್ ನಲ್ಲಿ ತೆಗೆದುಕೊಳ್ಳುವ ಅವಕಾಶವಿದೆ. ಅಸ್ಟ್ರಾಜೆನೆಕಾ ತಯಾರಿಸಿದ ಲಸಿಕೆ ಯುಕೆ ಉತ್ಪನ್ನ ಆಗಿರುವುದರಿಂದ ಆಟಗಾರರಿಗೆ ಕೋವಿಶೀಲ್ಡ್ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.
ಆಟಗಾರರು ಕೊವಾಕ್ಸಿನ್ ಲಸಿಕೆ ತೆಗೆದುಕೊಂಡಲ್ಲಿ ಒಂದು ಡೋಸ್ ಮಾತ್ರ ಭಾರತದಲ್ಲಿ ಸಿಗಲಿದೆ. ಎರಡನೇ ಲಸಿಕೆ ತೆಗೆದುಕೊಳ್ಳಲು ನಾಲ್ಕು ತಿಂಗಳು ಕಾಯಬೇಕಾಗುತ್ತದೆ. ಹಾಗಾಗಿ ಕೋವಿಶೀಲ್ಡ್ ಲಸಿಕೆ ತೆಗೆದುಕೊಳ್ಳುವಂತೆ ಸಲಹೆ ನೀಡಲಾಗಿದೆ.