ಸಿಡ್ನಿ: ಮಾದಕ ದ್ರವ್ಯ ಕೊಕೇನ್ ಮಾರಾಟದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಲೆಗ್ ಸ್ಪಿನ್ನರ್ ಸ್ಟುವರ್ಟ್ ಮೆಕ್ ಗಿಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಟುವರ್ಟ್ ಮೆಕ್ ಗಿಲ್ ಅವರು 2.74 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಕೊಕೇನ್ ಮಾರಾಟ ವ್ಯವಹಾರ ನಡೆಸಿದ ಆರೋಪ ಹೊಂದಿದ್ದಾರೆ. ಅವರು ಇಬ್ಬರು ವ್ಯಕ್ತಿಗಳಿಗೆ ಕೊಕೇನ್ ಮಾರಾಟದ ವ್ಯವಹಾರ ಕುದುರಿಸಿದ್ದರು. 2021ರ ಏಪ್ರಿಲ್ ನಲ್ಲಿ ಉತ್ತರ ಸಿಡ್ನಿಯಲ್ಲಿ ಸ್ಟುವರ್ಟ್ ಮೆಕ್ ಗಿಲ್ ಅವರನ್ನು ಅಪಹರಿಸಲಾಗಿತ್ತು. ಅಪಹರಣಕಾರರು ನನ್ನನ್ನು ವಿವಸ್ತ್ರ ಮಾಡಿ ಥಳಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದರು. ಈ ಘಟನೆ ಬಗ್ಗೆ ವಿಸ್ತೃತ ತನಿಖೆ ನಡೆಸಿದ ಪೊಲೀಸರು ಅಪಹರಣದ ಘಟನೆಗೂ ಮಾದಕ ದ್ರವ್ಯ ಮಾರಾಟ ವ್ಯವಹಾರಕ್ಕೂ ಸಂಬಂಧವಿದೆ ಎಂದು ಹೇಳಿ ಮೆಕ್ ಗಿಲ್ ಅವರನ್ನು ಬಂಧಿಸಿದ್ದಾರೆ.
ಒಮ್ಮೆ ವಿಶ್ವದ ಎರಡನೇ ಅತ್ಯುತ್ತಮ ಬೌಲರ್ ಆಗಿದ್ದ ಮೆಕ್ ಗಿಲ್ ಈಗ ಬೃಹತ್ ಕೊಕೇನ್ ಪೂರೈಕೆ ಆರೋಪದ ಮೇಲೆ ಬಂಧಿತರಾಗಿದ್ದಾರೆ. ನ್ಯೂ ಸೌತ್ ವೇಲ್ಸ್ ಪೊಲೀಸರು ಕೊಕೇನ್ ಡೀಲ್ ಪ್ರಕರಣದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಲೆಗ್ ಸ್ಪಿನ್ನರ್ ಸ್ಟುವರ್ಟ್ ಮೆಕ್ ಗಿಲ್ ವಿರುದ್ಧ ಆರೋಪ ಹೊರಿಸಿದ್ದಾರೆ. ಸೆಪ್ಟೆಂಬರ್ 12 ರಂದು ಮ್ಯಾಕ್‌ಗಿಲ್ ಅವರನ್ನು ಎನ್‌ಎಸ್‌ಡಬ್ಲ್ಯೂ ಪೊಲೀಸರು ಬಂಧಿಸಿದ್ದಾರೆ. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ನಿಷೇಧಿತ ಡ್ರಗ್ ಡೀಲ್ 2019 ರಲ್ಲಿ ನಡೆಯಿತು, ಇದರಲ್ಲಿ ಸ್ಟುವರ್ಟ್ ಮ್ಯಾಕ್‌ಗಿಲ್ 1 ಕೆಜಿ ಕೊಕೇನ್‌ಗಾಗಿ ಇಬ್ಬರು ಜನರ ನಡುವೆ ಡ್ರಗ್ ಡೀಲ್ ಕುದುರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಪಹರಣ ಪ್ರಕರಣದ ಹೆಚ್ಚಿನ ತನಿಖೆಯಲ್ಲಿ, ಅಪಹರಣ ಘಟನೆ ಮತ್ತು ಕೊಕೇನ್ ಡೀಲ್ ಪ್ರಕರಣ ಪರಸ್ಪರ ಸಂಬಂಧ ಹೊಂದಿದೆ ಎಂದು ಪೊಲೀಸರು ಕಂಡುಕೊಂಡಿದ್ದು, ಪ್ರಕರಣದಲ್ಲಿ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ.