
ಸಾಗರ್ ಧನಕರ್ ಹತ್ಯೆ ಪ್ರಕರಣದಲ್ಲಿ ದೆಹಲಿ ಕೋರ್ಟ್ ಮಧ್ಯಂತರ ಜಾಮೀನು ನೀಡಿದ ಒಂದು ದಿನದ ನಂತರ ಒಲಿಂಪಿಯನ್ ಕುಸ್ತಿಪಟು ಸುಶೀಲ್ ಕುಮಾರ್ ಶನಿವಾರ ರಾತ್ರಿ ತಿಹಾರ್ ಜೈಲಿನಿಂದ ಬಿಡುಗಡೆಗೊಂಡರು.
ಭದ್ರತಾ ಕಾರಣಗಳಿಗಾಗಿ ಅವರನ್ನು ಪ್ರತ್ಯೇಕ ಗೇಟ್ ನಿಂದ ಬಿಡುಗಡೆ ಮಾಡಲಾಗಿದೆ. ಬೆನ್ನು ನೋವಿನಿಂದ ಬಳಲುತ್ತಿರುವ ಪತ್ನಿಯ ಶಸ್ತ್ರಚಿಕಿತ್ಸೆ ಕಾರಣಕ್ಕಾಗಿ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿತ್ತು.
ಸಾಗರ್ ಧನಕರ್ ಹತ್ಯೆ ಪ್ರಕರಣದ 18 ಆರೋಪಿಗಳಲ್ಲಿ ಸುಶೀಲ್ ಕುಮಾರ್ ಒಬ್ಬರು. ಶನಿವಾರ ಸಂಜೆಯೇ ಅವರ ಬಿಡುಗಡೆ ವಾರಂಟ್ ತಿಹಾರ್ ಜೈಲಿಗೆ ತಲುಪಿತ್ತು. ಭದ್ರತಾ ಕಾರಣಗಳಿಗಾಗಿ ಸುಶೀಲ್ ಅವರನ್ನು ಪ್ರತ್ಯೇಕ ಗೇಟ್‌ನಿಂದ ಬಿಡುಗಡೆ ಮಾಡಲಾಗಿದೆ ಎಂದು ಸುಶೀಲ್ ಪರ ವಕೀಲ ಸುಮೀತ್ ಶೋಕೀನ್ ಖಚಿತಪಡಿಸಿದ್ದಾರೆ.
ಸುಶೀಲ್ ಕುಮಾರ್‌ಗೆ ದೆಹಲಿ ನ್ಯಾಯಾಲಯ ಶುಕ್ರವಾರ ಮಧ್ಯಂತರ ಜಾಮೀನು ನೀಡಿದೆ. ನವೆಂಬರ್ 7 ರಂದು ಪತ್ನಿಗೆ ಶಸ್ತ್ರಚಿಕಿತ್ಸೆಯನ್ನು ನಿಗದಿಪಡಿಸಲಾಗಿದೆ. ಇಬ್ಬರು ಭದ್ರತಾ ಸಿಬ್ಬಂದಿಯನ್ನು ಕಣ್ಗಾವಲು ಮತ್ತು ಅವರ ಭದ್ರತೆಗೆ ನಿಯೋಜಿಸುವಂತೆ ನ್ಯಾಯಾಲಯ ಸೂಚಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶಿವಾಜಿ ಆನಂದ್ ಅವರು ಸುಶೀಲ್ ಕುಮಾರ್ ಅವರಿಗೆ ನವೆಂಬರ್ 12 ರವರೆಗೆ ಮಧ್ಯಂತರ ಜಾಮೀನು ನೀಡಿ ಒಂದು ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಅಂತಹ ಮೊತ್ತದಲ್ಲಿ ಇಬ್ಬರ ಶ್ಯೂರಿಟಿಯನ್ನು ಒದಗಿಸಿದರು. ಜಾಮೀನು ನೀಡುವಾಗ ನ್ಯಾಯಾಲಯ ಹಲವು ಕಠಿಣ ಷರತ್ತುಗಳನ್ನು ವಿಧಿಸಿದೆ.