ಟೆಸ್ಟ್ ಹಾಗೂ ಟಿ-20 ಸರಣಿ ನಂತ್ರ ಭಾರತ-ಇಂಗ್ಲೆಂಡ್ ಮಧ್ಯೆ ಏಕದಿನ ಸರಣಿ ನಡೆಯಲಿದೆ. ಮೂರು ಪಂದ್ಯಗಳ ಸರಣಿ ನಾಳೆಯಿಂದ ಶುರುವಾಗಲಿದೆ. ಏಕದಿಂದ ಪಂದ್ಯದಲ್ಲಿ ಉಭಯ ತಂಡಗಳ ಮಧ್ಯೆ ತೀವ್ರ ಸ್ಪರ್ಧೆ ನಿರೀಕ್ಷಿಸಲಾಗಿದೆ. ಇಂಗ್ಲೆಂಡ್, ವಿಶ್ವದ ನಂಬರ್ ಒನ್ ಏಕದಿನ ತಂಡವಾಗಿದೆ. ಭಾರತ ವಿಶ್ವದ ನಂಬರ್ 2 ಏಕದಿನ ತಂಡವಾಗಿದೆ.
ನಾಳೆ ನಡೆಯಲಿರುವ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಯಾವೆಲ್ಲ ಆಟಗಾರರು ಮೈದಾನಕ್ಕಿಳಿಯರಲಿದ್ದಾರೆಂಬ ಕುತೂಹಲವಿದೆ. ಅದ್ರಲ್ಲೂ ಬ್ಯಾಟಿಂಗ್ ನ ನಾಲ್ಕನೇ ಕ್ರಮಾಂಕದಲ್ಲಿ ಯಾವ ಆಟಗಾರರನ್ನು ಆಯ್ಕೆ ಮಾಡಬೇಕೆಂಬುದು ಟೀಂ ಇಂಡಿಯಾದ ನಾಯಕ ಕೊಹ್ಲಿಗೆ ಸವಾಲಿನ ವಿಷ್ಯವಾಗಿದೆ. ಶ್ರೇಯಸ್ ಐಯ್ಯರ್ ಹಾಗೂ ಸೂರ್ಯಕುಮಾರ್ ಮಧ್ಯೆ ಸ್ಪರ್ಧೆಯಿದೆ.
ಸೂರ್ಯಕುಮಾರ್ ಏಕದಿನ ಪಂದ್ಯದಲ್ಲಿ ಆಡಿಲ್ಲ. ಇಂಗ್ಲೆಂಡ್ ವಿರುದ್ಧದ ಟಿ-20 ತಂಡದಲ್ಲಿ ಸ್ಥಾನ ಪಡೆದ ಸೂರ್ಯಕುಮಾರ್, ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಸೂರ್ಯಕುಮಾರ್ ಗೆ ಮೂರನೇ ಟಿ-20 ಪಂದ್ಯದಲ್ಲಿ ಆಡಲು ಅವಕಾಶ ಸಿಕ್ಕಿತ್ತು. ಉತ್ತಮ ಪ್ರದರ್ಶನ ನೀಡಿದ ಸೂರ್ಯಕುಮಾರ್ 57 ರನ್ ಗಳಿಸಿದ್ದರು. ಕೊನೆ ಪಂದ್ಯದಲ್ಲಿ 32 ರನ್ ಗಳಿಸಿದ್ದರು.
ಇನ್ನು ಐಯ್ಯರ್, ಏಕದಿನ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಆದ್ರೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಯ್ಯರ್ ಪ್ರದರ್ಶನ ಉತ್ತಮವಾಗಿರಲಿಲ್ಲ. ಮೂರು ಏಕದಿನ ಪಂದ್ಯಗಳಲ್ಲಿ ಐಯ್ಯರ್ ಒಟ್ಟೂ 59 ರನ್ ಗಳಿಸಿದ್ದರು. ಐಯ್ಯರ್ ಈವರೆಗೆ 21 ಏಕದಿನ ಪಂದ್ಯಗಳನ್ನು ಆಡಿದ್ದು, ಅವರ ರೆಕಾರ್ಡ್ ಉತ್ತಮವಾಗಿದೆ. ಹಾಗಾಗಿ ಕೊಹ್ಲಿ ನಾಳಿನ ಪಂದ್ಯದಲ್ಲಿ ಯಾರಿಗೆ ಜಾಗ ನೀಡ್ತಾರೆ ಎಂಬುದನ್ನು ಕಾದು ನೋಡಬೇಕಿದೆ.