ತಿರುವನಂತಪುರ: ಕೇರಳದ ತಿರುವನಂತಪುರಂನ ಗ್ರೀನ್ ಫೀಲ್ಡ್ ಇಂಟರ್ ನ್ಯಾಷನಲ್ ಕ್ರೀಡಾಂಗಣದಲ್ಲಿ ಇಂದು ಭಾರತ -ಶ್ರೀಲಂಕಾ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯ ನಡೆಯಲಿದೆ. ಈಗಾಗಲೇ 2-0 ಯಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ಆತಿಥೇಯ ತಂಡ ಎರಡು ಪಂದ್ಯಗಳಲ್ಲಿ ಆಡಿದ ಕೆಲವು ಆಟಗಾರರಿಗೆ ವಿಶ್ರಾಂತಿ ನೀಡಿ ಬೆಂಚ್ ಕಾದ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಏಕದಿನ ಸರಣಿಗೂ ಮೊದಲು ನಡೆದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಶ್ರೀಲಂಕಾ ತಂಡವನ್ನು ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ ಪರಾಭಾವಗೊಳಿಸಿತ್ತು. 2 -1 ಅಂತರದಿಂದ ಟಿ20 ಸರಣಿ ಜಯಿಸಿದ ಟೀಂ ಇಂಡಿಯಾ ರೋಹಿತ್ ಶರ್ಮ ನೇತೃತ್ವದಲ್ಲಿ ಏಕದಿನ ಸರಣಿಯಲ್ಲಿ ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದಿದ್ದು, ಮೂರನೇ ಪಂದ್ಯವನ್ನು ಗೆದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡುವ ತವಕದಲ್ಲಿದೆ.
ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ಗೆದ್ದಿತ್ತು. ಇಂದಿನ ಪಂದ್ಯವನ್ನು ಕೂಡ ಗೆಲ್ಲುವ ಮೂಲಕ ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಗೆ ಅವಕಾಶ ನೀಡದಿರಲು ಲಂಕಾ ಕಾರ್ಯತಂತ್ರ ರೂಪಿಸಿದೆ. ಮಧ್ಯಾಹ್ನ 1:30ಕ್ಕೆ ಪಂದ್ಯ ಆರಂಭವಾಗಲಿದ್ದು, ಗೆಲುವಿಗೆ ಉಭಯ ತಂಡಗಳ ನಾಯಕರು ಕಾರ್ಯತಂತ್ರ ರೂಪಿಸಿದ್ದಾರೆ.