ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್ ಮೊದಲ ಪಂದ್ಯದಲ್ಲೇ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ರನ್ನರ್ ಅಪ್ ನ್ಯೂಜಿಲೆಂಡ್ ಭರ್ಜರಿ ಜಯಗಳಿಸಿದೆ. ನ್ಯೂಜಿಲೆಂಡ್ 9 ವಿಕೆಟ್‌ಗಳಿಂದ ಇಂಗ್ಲೆಂಡ್ ಅನ್ನು ಸೋಲಿಸಿತು.
283 ಗೆಲುವಿನ ಗುರಿ ಪಡೆದ ನ್ಯೂಜಿಲೆಂಡ್ ಕೇವಲ 36.2 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 283 ರನ್ ಗಳಿಸಿ ಗೆಲುವಿನ ಶುಭಾರಂಭ ಮಾಡಿದೆ. ನ್ಯೂಜಿಲೆಂಡ್ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಡೆವಾನ್ ಕಾನ್ವೆ ಅಜೇಯ 152, ರಚಿನ್ ರವೀಂದ್ರ ಅಜೇಯ 123 ರನ್ ಗಳಿಸಿದ್ದಾರೆ.
ಟಾಸ್ ಸೋತ ಇಂಗ್ಲೆಂಡ್ ಅನ್ನು ನ್ಯೂಜಿಲೆಂಡ್‌ನ ಸ್ಟ್ಯಾಂಡ್-ಇನ್ ನಾಯಕ ಟಾಮ್ ಲ್ಯಾಥಮ್ ಮೊದಲು ಬ್ಯಾಟಿಂಗ್ ಮಾಡಲು ಕಳುಹಿಸಿದರು. ಹಾಲಿ ಚಾಂಪಿಯನ್ ಇಂಗ್ಲೆಂಡ್ 50 ಓವರ್‌ಗಳಲ್ಲಿ 9 ವಿಕೆಟ್ ಗೆ 282 ರನ್ ಗಳಿಸಿತು. ಜೋ ರೂಟ್ 77, ಜೋಸ್ ಬಟ್ಲರ್ 43, ಜಾನಿ ಬೈರ್ ಸ್ಟೋ 33 ರನ್ ಗಳಿಸಿದರು. ನ್ಯೂಜಿಲೆಂಡ್ ಪರ ವೇಗಿ ಮ್ಯಾಟ್ ಹೆನ್ರಿ 3 ವಿಕೆಟ್‌ಗಳನ್ನು ಕಬಳಿಸಿದರು.
ಇನ್ನು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ ಅದ್ಭುತ ದಾಖಲೆಗೆ ಸಾಕ್ಷಿಯಾಗಿದೆ. ಇದು 52 ವರ್ಷಗಳ ODI ಕ್ರಿಕೆಟ್ ಇತಿಹಾಸದಲ್ಲಿ ಎಂದಿಗೂ ಆಗಿಲ್ಲ ಎನ್ನುವುದೇ ವಿಶೇಷವಾಗಿದೆ. ಏಕದಿನ ಪಂದ್ಯದ ಇನ್ನಿಂಗ್ಸ್ ನಲ್ಲಿ ಎಲ್ಲಾ 11 ಬ್ಯಾಟರ್ ಗಳು ಎರಡಂಕಿ ಗಳಿಸಿದ್ದು ದಾಖಲೆಯಾಗಿದೆ.