ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾದ ಯುವ ಆಟಗಾರರ ಬಗ್ಗೆಯೇ ಈಗ ಎಲ್ಲಾ ಕಡೆ ಮಾತು. ಅದರಲ್ಲೂ ಪ್ರಮುಖ ಆಟಗಾರರು ಗಾಯಗೊಂಡ ಕಾರಣ ನಾಲ್ಕನೇ ಟೆಸ್ಟ್ಗೆ ತಂಡದಲ್ಲಿ ಬಹಳ ಅನಿರೀಕ್ಷಿತವಾಗಿ ಸ್ಥಾನ ಪಡೆದ ಆಟಗಾರರು ಸಹ ತಂಡವನ್ನು ಗೆಲ್ಲಿಸುವಷ್ಟು ಕೌಶಲ್ಯ ಹಾಗೂ ಮಾನಸಿಕ ಕ್ಷಮತೆ ತೋರಿರುವ ವಿಷಯದ ಬಗ್ಗೆ ಕ್ರಿಕೆಟ್ ಪಂಡಿತರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಸರಣಿಯಲ್ಲಿ ಹೀರೋಗಳಾಗಿ ಹೊರಹೊಮ್ಮಿದ ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಟಿ ನಟರಾಜನ್, ಶಾರ್ದೂಲ್ ಠಾಕೂರ್ ಹಾಗೂ ವಾಶಿಂಗ್ಟನ್ ಸುಂದರ್ ತಂತಮ್ಮ ವೈಯಕ್ತಿಕ ಜೀವನದ ಸಂಕಷ್ಟಗಳನ್ನು ದಿಟ್ಟವಾಗಿ ಎದುರಿಸಿ ನಿಂತು ಟೀಂ ಇಂಡಿಯಾ ಸ್ಟಾರ್ಗಳಾಗಿ ಹೊರಹೊಮ್ಮಿದ್ದಾರೆ.
ಈ ಐವರ ಜೀವನಗಾಥೆಗಳ ಬಗ್ಗೆ ವಾಟ್ಸಾಪ್ ಫಾರ್ವಡ್ ಮೆಸೇಜ್ಗಳು ಸದ್ದು ಮಾಡುತ್ತಿವೆ.
ಮೊಹಮ್ಮದ್ ಸಿರಾಜ್
ರಾಷ್ಟ್ರಗೀತೆ ಮೊಳಗುತ್ತಲೇ ಭಾವುಕರಾಗಿ ಆನಂದಭಾಷ್ಪ ಸುರಿಸಿದ ಸಿರಾಜ್ ಹೆಡ್ಲೈನ್ಗಳಲ್ಲಿ ಮಿಂಚುತ್ತಿದ್ದಾರೆ. ಆಸ್ಟ್ರೇಲಿಯಾ ಪ್ರವಾಸಕ್ಕೆಂದು ಟೀಂ ಇಂಡಿಯಾ ಆ ದೇಶಕ್ಕೆ ಕಾಲಿಟ್ಟ ಕೂಡಲೇ ತನ್ನ ತಂದೆಯನ್ನು ಕಳೆದುಕೊಂಡ ಸಿರಾಜ್, ಈ ದೊಡ್ಡ ನಷ್ಟದ ನಡವೆಯೂ ತಂಡದೊಂದಿಗೇ ಉಳಿಯಲು ನಿರ್ಧರಿಸಿದ್ದರು. ಕೊನೆಯ ಟೆಸ್ಟ್ನಲ್ಲಿ ಎದುರಾಳಿಯ ಎರಡನೇ ಇನಿಂಗ್ಸ್ನಲ್ಲಿ ಐದು ವಿಕೆಟ್ ಪಡೆದ ಸಿರಾಜ್, ತಮ್ಮೆಲ್ಲಾ ತ್ಯಾಗಕ್ಕೂ ತಕ್ಕ ಪ್ರತಿಫಲವನ್ನೇ ಕಂಡಿದ್ದಾರೆ.
ನವದೀಪ್ ಸೈನಿ
ಹರಿಯಾಣಾದ ಕರ್ನಲ್ನಲ್ಲಿ ಜನಿಸಿದ ಸೈನಿ, ಮಧ್ಯಮ ವರ್ಗದ ಸಿಖ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸೈನಿ ತಂದೆ ಹರಿಯಾಣಾ ಸರ್ಕಾರದ ಚಾಲಕ ವೃತ್ತಿಯಲ್ಲಿದ್ದರೆ, ಅವರ ಅಜ್ಜ ಸ್ವತಂತ್ರ್ಯ ಹೋರಾಟದ ವೇಳೆ ಭಾರತೀಯ ರಾಷ್ಟ್ರೀಯ ಸೇನೆಯಲ್ಲಿ ಸಕ್ರಿಯವಾಗಿದ್ದರು. ಹಣಕಾಸು ಹೊಂದಿಸಲು ಕಷ್ಟಪಡುತ್ತಿದ್ದ ಸೈನಿ ತಂದೆಗೆ ಮಗನಿಗೆ ಕ್ರಿಕೆಟ್ನಲ್ಲಿ ಮುಂದುವರೆಯಲು ನೆರವಾಗಲು ಬಹಳ ಕಷ್ಟವಾಗಿತ್ತು. ತನ್ನ ಐದನೇ ವಯಸ್ಸಿನಲ್ಲಿ ಪ್ಲಾಸ್ಟಿಕ್ ಬಾಲೊಂದನ್ನು ಪಡೆದ ಸೈನಿ ವೇಗವಾಗಿ ಬೌಲಿಂಗ್ ಮಾಡುವುದನ್ನು ಕಲಿಯಲು ಆರಂಭಿಸಿದರು. ಶಾಲಾ ದಿನಗಳಲ್ಲಿ ಸಾಕಷ್ಟು ಸ್ಥಳೀಯ ಟೂರ್ನಮೆಂಟ್ಗಳಲ್ಲಿ ಮಿಂಚುತ್ತಾ ಬಂದ ಸೈನಿ ಕುಟುಂಬದ ವಿರೋಧದ ನಡುವೆಯೂ ಕ್ರಿಕೆಟಿಂಗ್ ವೃತ್ತಿಯಲ್ಲಿ ಒಂದೊಂದೇ ಹೆಜ್ಜೆ ಇಡುತ್ತಾ ಇಷ್ಟು ದೂರ ಸಾಗಿ ಬಂದಿದ್ದಾರೆ.
ಶಾರ್ದೂಲ್ ಠಾಕೂರ್
ಮುಂಬಯಿಯ ಲೋಕಲ್ ರೈಲಿನಲ್ಲಿ ಪ್ರತಿನಿತ್ಯ 100+ ಕಿಮೀ ಪಯಣಿಸಿ ಲೋಕಲ್ ಲೀಗ್ ಪಂದ್ಯಗಳಲ್ಲಿ ಆಡುತ್ತಿದ್ದ ಶಾರ್ದೂಲ್, ಹಿರಿಯ ಆಟಗಾರರಾದ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ಜಹೀರ್ ಖಾನ್, ವಾಸಿಂ ಜಾಫರ್ ಹಾಗೂ ಅಭಿಷೇಕ್ ನಾಯರ್ರ ನೆರವಿನಿಂದ ತಮ್ಮ ಫಿಟ್ನೆಸ್ ಮಟ್ಟವನ್ನು ಸಾಧಿಸಿಕೊಂಡು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಸಫಲರಾಗಿದ್ದಾರೆ.
ಟಿ ನಟರಾಜನ್
ತಮಿಳುನಾಡಿನ ಸೇಲಂ ಬಳಿಯ ಚಿನ್ನಂಪತ್ತಿಯಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಆಡಿಕೊಂಡು ಬಂದ ನಟರಾಜನ್, 2020ರ ಐಪಿಎಲ್ನಲ್ಲಿ ಹೈದರಾಬಾದ್ ತಂಡದ ಪರವಾಗಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಪರಿಣಾಮ ಆಸ್ಟ್ರೇಲಿಯಾ ಪ್ರವಾಸದ ವೇಳೆ ಟೀಂ ಇಂಡಿಯಾದ ಏಕದಿನ ತಂಡದ ಆಟಗಾರರಾಗಿ ಪಾದಾರ್ಪಣೆ ಮಾಡಿದ ನಟರಾಜನ್ ಇದೀಗ ಟೆಸ್ಟ್ ಪಂದ್ಯದಲ್ಲೂ ತಂಡವನ್ನು ಪ್ರತಿನಿಧಿಸಿದ್ದಾರೆ. ನಟರಾಜನ್ ತಂದೆ ಕೈಮಗ್ಗ ಕಾರ್ಮಿಕರಾಗಿದ್ದು, ಅವರ ತಾಯಿ ಬೀದಿ ಬದಿಯಲ್ಲಿ ಅಂಗಡಿಯೊಂದನ್ನು ಇಟ್ಟುಕೊಂಡಿದ್ದಾರೆ.
ವಾಷಿಂಗ್ಟನ್ ಸುಂದರ್
ಐಪಿಎಲ್ನಲ್ಲಿ ಕಳೆದ ಕೆಲ ವರ್ಷಗಳಿಂದ ಆಡುತ್ತಿರುವ ವಾಷಿಂಗ್ಟನ್ ಸುಂದರ್ ಅವರ ತಂದೆಯ ಕ್ರಿಕೆಟ್ ವೃತ್ತಿಗೆ ಅವರ ಸ್ನೇಹಿತ ಪಿಡಿ ವಾಷಿಂಗ್ಟನ್ ಬಹಳ ನೆರವಾಗಿದ್ದರು. ಇಬ್ಬರ ನಡುವೆ ಬಹಳ ಅವಿನಾಭಾವ ಸಂಬಂಧ ಇತ್ತು. ವಾಷಿಂಗ್ಟನ್ ನಿಧನರಾದ ಬಳಿಕ ಸುಂದರ್ ತಂದೆ ತಮ್ಮ ಮಗನಿಗೆ ವಾಷಿಂಗ್ಟನ್ ಎಂದು ನಾಮಕರಣ ಮಾಡುವ ಮೂಲಕ ತಮ್ಮ ಕ್ರಿಕೆಟ್ ವೃತ್ತಿಗೆ ನೆರವಾದ ಆಪ್ತ ಸ್ನೇಹಿತನಿಗೆ ಗೌರವ ಸಲ್ಲಿಸಿದ್ದಾರೆ.