ಬೆಂಗಳೂರು: ಕ್ರೀಡಾಪಟುಗಳಿಗೆ ನೇರ ನೇಮಕಾತಿ ಮೂಲಕ ಸರ್ಕಾರಿ ಉದ್ಯೋಗ ನೀಡುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಒಲಿಂಪಿಕ್ಸ್, ಪ್ಯಾರಾಲಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ಸರ್ಕಾರ ಬಂಪರ್ ಕೊಡುಗೆ ನೀಡಿದೆ.
ಒಲಂಪಿಕ್ಸ್ ಮತ್ತು ಪ್ಯಾರಾಲಂಪಿಕ್ಸ್ ನಲ್ಲಿ ಪದಕ ವಿಜೇತರಿಗೆ ಗ್ರೂಪ್ ಎ ವೃಂದದ ಸರ್ಕಾರಿ ಹುದ್ದೆ ನೀಡಲಾಗುವುದು. ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಪದಕ ವಿಜೇತರಿಗೆ ಗ್ರೂಪ್ ಬಿ ವೃಂದದ ಹುದ್ದೆಗಳು ಹಾಗೂ ನ್ಯಾಷನಲ್ ಗೇಮ್ಸ್ ನಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ಗ್ರೂಪ್ ಸಿ ವೃಂದದ ಹುದ್ದೆ ನೀಡಲಾಗುವುದು.
ಉಪವಿಭಾಗಾಧಿಕಾರಿ, ಸಹಾಯಕ ಆಯುಕ್ತರು ಸೇರಿದಂತೆ 9 ಇಲಾಖೆಗಳಲ್ಲಿ ತಲಾ 5 ರಂತೆ 45 ಗ್ರೂಪ್ ಎ ಹುದ್ದೆಗಳು, ತಹಶೀಲ್ದಾರ್ ಸೇರಿದಂತೆ 15 ಇಲಾಖೆಗಳಲ್ಲಿ 150 ಗ್ರೂಪ್ ಬಿ ವೃಂದದ ಹುದ್ದೆಗಳನ್ನು ಕಾಯ್ದಿರಿಸಲಾಗುವುದು. ಕ್ರೀಡಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಆಯ್ಕೆ ಸಮಿತಿ ಮೂಲಕ ಕ್ರೀಡಾಪಟುಗಳನ್ನು ನೇರ ನೇಮಕಾತಿ ಮಾಡಲಾಗುವುದು ಎಂದು ಕ್ರೀಡಾ ಸಚಿವ ನಾರಾಯಣ ಗೌಡ ಮಾಹಿತಿ ನೀಡಿದ್ದಾರೆ.