ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಹೊಸ ದಾಖಲೆ ಬರೆದಿದ್ದು, 200 ಐಪಿಎಲ್ ಪಂದ್ಯಗಳಲ್ಲಿ ಆಡಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಐಪಿಎಲ್ ನಲ್ಲಿ ಧೋನಿ ಬರೋಬ್ಬರಿ 200 ಪಂದ್ಯಗಳನ್ನಾಡಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ 170 ಪಂದ್ಯಗಳನ್ನಾಡಿದ್ದಾರೆ. 30 ಪಂದ್ಯಗಳಲ್ಲಿ ರೈಸಿಂಗ್ ಪುಣೆ ಸೂಪರ್ ಜಾಯಿಂಟ್ ತಂಡವನ್ನು ಅವರು ಪ್ರತಿನಿಧಿಸಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 200 ಪಂದ್ಯಗಳಲ್ಲಿ ಭಾಗವಹಿಸಿದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಧೋನಿ ಕ್ಯಾಪ್ ಗೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ.
ಅಬುಧಾಬಿಯ ಶೇಕ್ ಜಾಯೆದ್ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ಅವರು ಮೈದಾನಕ್ಕೆ ಇಳಿಯುವ ಮೂಲಕ ಈ ಸಾಧನೆ ಮಾಡಿದ್ದಾರೆ. 2008ರಲ್ಲಿ ಐಪಿಎಲ್ ಉದ್ಘಾಟನೆಯಾದ ವರ್ಷದಿಂದ ಅವರು ಐಪಿಎಲ್ ಭಾಗವಾಗಿದ್ದಾರೆ. ಮಾತ್ರವಲ್ಲ, ಚೆನ್ನೈ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.
ಎರಡು ವರ್ಷ ಚೆನ್ನೈ ತಂಡ ಅಮಾನತು ಆದ ನಂತರ 2018 ರಲ್ಲಿ ಅವರು ಮತ್ತೆ ತಂಡದ ನಾಯಕರಾಗಿದ್ದಾರೆ. 2016, 17 ರಲ್ಲಿ ಚೆನ್ನೈ ತಂಡದ ಅನುಪಸ್ಥಿತಿಯಲ್ಲಿ ರೈಸಿಂಗ್ ಪುಣೆ ಸೂಪರ್ ಜಾಯಿಂಟ್ ತಂಡದ ಭಾಗವಾಗಿದ್ದರು. ಒಟ್ಟಾರೆಯಾಗಿ ಧೋನಿ ಐಪಿಎಲ್ ನಲ್ಲಿ 23 ಅರ್ಧ ಶತಕಗಳೊಂದಿಗೆ 4568 ರನ್ ಗಳಿಸಿದ್ದಾರೆ.