ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಈ ವರ್ಷ ಅವರು ಐಪಿಎಲ್ ನಲ್ಲಿ ಆಡಲಿದ್ದಾರೆ.
ಎಂಎಸ್ ಧೋನಿ ಭಾರತಕ್ಕೆ ಏಕದಿನ ವಿಶ್ವಕಪ್ ಮತ್ತು ಟಿ20 ವಿಶ್ವಕಪ್ ತಂದುಕೊಟ್ಟ ಯಶಸ್ವಿ ನಾಯಕನಾಗಿದ್ದಾರೆ. ಮೂರು ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ.
90 ಟೆಸ್ಟ್ ಪಂದ್ಯಗಳಲ್ಲಿ 6 ಶತಕ, 1 ದ್ವಿಶತಕ ಸೇರಿದಂತೆ 4876 ರನ್ ಗಳಿಸಿದ್ದಾರೆ.
350 ಏಕದಿನ ಪಂದ್ಯಗಳಲ್ಲಿ 10 ಶತಕ, 73 ಅರ್ಧ ಶತಕ ಸಹಿತ 10773 ರನ್ ಗಳಿಸಿದ್ದಾರೆ.
98 ಟಿ20 ಪಂದ್ಯಗಳಲ್ಲಿ 2 ಅರ್ಧ ಶತಕ ಸಹಿತ 1617 ರನ್ ಗಳಿಸಿದ್ದಾರೆ.
190 ಐಪಿಎಲ್ ಪಂದ್ಯಗಳಲ್ಲಿ 23 ಅರ್ಧ ಶತಕ ಸಹಿತ 4432 ರನ್ ಗಳಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟಿಗೆ ಗುಡ್ ಬೈ ಹೇಳಿರುವ ಧೋನಿ ಐಪಿಎಲ್ ನಲ್ಲಿ ಮುಂದುವರೆಯಲಿದ್ದಾರೆ. 16 ವರ್ಷ ಅವರು ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ. ನಿವೃತ್ತಿ ಬಗ್ಗೆ ಮಾಹಿತಿ ನೀಡಿದ ಅವರು, ಇದುವರೆಗೂ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
ಕೊನೆಯ ಓವರ್ ಗಳಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಅತಿ ಹೆಚ್ಚು ರನ್ ಕಲೆ ಹಾಕುತ್ತಿದ್ದ ಮತ್ತು ವಿಕೆಟ್ ಗಳ ನಡುವೆ ಮಿಂಚಿನಂತೆ ಓಡುತ್ತಿದ್ದ ಧೋನಿ ಆಟವನ್ನು ನೋಡುವುದೇ ಅಭಿಮಾನಿಗಳಿಗೆ ಸೊಬಗು. ಹೆಲಿಕಾಪ್ಟರ್ ಶಾಟ್ ಗಳಂತೂ ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಿದ್ದವು. ಇನ್ನು ಐಪಿಎಲ್ ನಲ್ಲಿ ಮಾತ್ರ ಅವರ ಆಟವನ್ನು ಕಣ್ತುಂಬಿಕೊಳ್ಳಬಹುದಾಗಿದೆ ಎನ್ನಲಾಗಿದೆ.