ಕೋಲ್ಕತ್ತಾ: ಭಾರತದ ವೇಗಿ ಮೊಹಮ್ಮದ್ ಶಮಿ ಅವರು ತಮ್ಮ ವಿಚ್ಛೇದಿತ ಪತ್ನಿ ಹಸಿನ್ ಜಹಾನ್ ಗೆ ಮಾಸಿಕ 50 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಕೋಲ್ಕತ್ತಾ ನ್ಯಾಯಾಲಯ ಸೋಮವಾರ ಆದೇಶಿಸಿದೆ.
ಹಸಿನ್ ಜಹಾನ್ ಅವರ ವೈಯಕ್ತಿಕ ಜೀವನಾಂಶ 50 ಸಾವಿರ ರೂ. ನೀಡಲು ತಿಳಿಸಲಾಗಿದೆ. 2018 ರಲ್ಲಿ ಹಸಿನ್ ಜಹಾನ್ ಅವರು ಮಾಸಿಕ 10 ಲಕ್ಷ ರೂ ಜೀವನಾಂಶವನ್ನು ಕೋರಿ ಕಾನೂನು ಮೊಕದ್ದಮೆ ಹೂಡಿದ್ದರು. ವೈಯಕ್ತಿಕ ವೆಚ್ಚಕ್ಕಾಗಿ 7 ಲಕ್ಷ ರೂ., ತಮ್ಮ ಮಗಳ ನಿರ್ವಹಣೆಗಾಗಿ 3 ಲಕ್ಷ ರೂ. ಕೇಳಿದ್ದರು.
2020-2021ರ ಹಣಕಾಸು ವರ್ಷದ ಭಾರತೀಯ ವೇಗಿಗಳ ಆದಾಯ ತೆರಿಗೆ ರಿಟರ್ನ್ಸ್ ಪ್ರಕಾರ 7 ಕೋಟಿ ರೂ.ಗಿಂತ ಹೆಚ್ಚಿದ್ದು, ಅದರ ಆಧಾರದ ಮೇಲೆ ಮಾಸಿಕ 10 ಲಕ್ಷ ರೂ. ಜೀವನಾಂಶ ಬೇಡಿಕೆ ಇದೆ ಎಂದು ಅವರ ವಕೀಲ ಮೃಗಾಂಕಾ ಮಿಸ್ತ್ರಿ ನ್ಯಾಯಾಲಯಕ್ಕೆ ತಿಳಿಸಿದರು.
ಶಮಿ ಪರ ವಕೀಲರಾದ ಸೆಲೀಮ್ ರೆಹಮಾನ್ ಅವರು, ಹಸಿನ್ ಜಹಾನ್ ಸ್ವತಃ ವೃತ್ತಿಪರ ಫ್ಯಾಷನ್ ಮಾಡೆಲ್ ಆಗಿ ಕೆಲಸ ಮಾಡುವ ಮೂಲಕ ಸ್ಥಿರ ಆದಾಯದ ಮೂಲವನ್ನು ಹೊಂದಿರುವುದರಿಂದ, ಹೆಚ್ಚಿನ ಜೀವನಾಂಶದ ಬೇಡಿಕೆಯನ್ನು ಸಮರ್ಥಿಸಲಾಗದು ಎಂದು ಹೇಳಿದ್ದಾರೆ.
ಅಂತಿಮವಾಗಿ ಎರಡೂ ಕಡೆಯ ವಾದವನ್ನು ಆಲಿಸಿದ ಕೆಳ ನ್ಯಾಯಾಲಯವು ಸೋಮವಾರ ಮಾಸಿಕ ಜೀವನಾಂಶವನ್ನು 1.30 ಲಕ್ಷ ರೂ. ನಿಗದಿ ಪಡಿಸಿದೆ. ಹಸಿನ್ ಜಹಾನ್ ಗೆ 50 ಸಾವಿರ ರೂ., ಮಗಳ ಭವಿಷ್ಯಕ್ಕಾಗಿ ಉಳಿದ ಹಣವೆಂದು ಹೇಳಲಾಗಿದೆ.