ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ದಾಖಲೆಯ 302 ರನ್ ಭರ್ಜರಿ ಗೆಲುವು ದಾಖಲಿಸಿದೆ.
ಪಂದ್ಯದಲ್ಲಿ ಭಾರತದ ಮೊಹಮ್ಮದ್ ಶಮಿ 5 ವಿಕೆಟ್ ಪಡೆದಿದ್ದಾರೆ. ಅವರು ವಿಶ್ವಕಪ್ ನಲ್ಲಿ ಭಾರತದ ಪರ ಅತ್ಯಧಿಕ ವಿಕೆಟ್ ಪಡೆದಿದ್ದಾರೆ. ಶಮಿ 45 ವಿಕೆಟ್ ಗಳಿಸಿದ್ದಾರೆ. ಜಹೀರ್ ಖಾನ್(44 ವಿಕೆಟ್), ಜಾವಗಲ್ ಶ್ರೀನಾಥ್(44), ಬೂಮ್ರಾ(33), ಅನಿಲ್ ಕುಂಬ್ಳೆ(31) ನಂತರದ ಸ್ಥಾನದಲ್ಲಿದ್ದಾರೆ.
ಏಕದಿನ ಕ್ರಿಕೆಟ್ ನಲ್ಲಿ ಭಾರತ ತಂಡದ ಪರವಾಗಿ ಅತ್ಯಧಿಕ ಬಾರಿ 5 ವಿಕೆಟ್ ಕಬಳಿಸಿದ ಬೌಲರ್ ಎಂಬ ಹೆಗ್ಗಳಿಕೆಗೆ ಶಮಿ ಪಾತ್ರರಾಗಿದ್ದಾರೆ. ಜಾವಗಲ್ ಶ್ರೀನಾಥ್ ಮತ್ತು ಹರ್ಭಜನ್ ಸಿಂಗ್ ಮೂರು ಬಾರಿ ಐದು ವಿಕೆಟ್ ಉರುಳಿಸಿ ದಾಖಲೆ ನಿರ್ಮಿಸಿದ್ದರು. ಶಮಿ ನಾಲ್ಕನೇ ಬಾರಿಗೆ ಐದು ವಿಕೆಟ್ ಕಬಳಿಸಿದ್ದಾರೆ.
ಏಕದಿನ ವಿಶ್ವಕಪ್ ನಲ್ಲಿ ಹೆಚ್ಚು ಬಾರಿ ಐದು ವಿಕೆಟ್ ಪಡೆದ ಭಾರತೀಯ ಬೌಲರ್ ಹಾಗೂ ವಿಶ್ವದ ಎರಡನೇ ಬೌಲರ್ ಆಗಿದ್ದಾರೆ. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಏಕದಿನ ವಿಶ್ವಕಪ್ ನಲ್ಲಿ ಮೂರು ಬಾರಿ ಐದು ವಿಕೆಟ್ ಕಬಳಿಸಿದ್ದು, ಈ ದಾಖಲೆಯನ್ನು ಶಮಿ ಸರಿಗಟ್ಟಿದ್ದಾರೆ.
ಈ ವಿಶ್ವಕಪ್ ನಲ್ಲಿ ಮೂರು ಪಂದ್ಯಗಳನ್ನಾಡಿರುವ ಶಮಿ 14 ವಿಕೆಟ್ ಕಬಳಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ 5, ಇಂಗ್ಲೆಂಡ್ ವಿರುದ್ಧ 4, ಶ್ರೀಲಂಕಾ ವಿರುದ್ಧ 5 ವಿಕೆಟ್ ಉರುಳಿಸಿದ್ದಾರೆ. ಇದರೊಂದಿಗೆ ಏಕದಿನ ವಿಶ್ವಕಪ್ ನಲ್ಲಿ ಅತಿ ಕಡಿಮೆ ಪಂದ್ಯಗಳಿಂದ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಬರೆದಿದ್ದಾರೆ.
ಶಮಿ ವಿಶ್ವಕಪ್ ನಲ್ಲಿ ಅತ್ಯಧಿಕ ಬಾರಿ 4 ಪ್ಲಸ್ ವಿಕೆಟ್ ಪಡೆದ ವಿಶ್ವದಾಖಲೆ ಬರದಿದ್ದಾರೆ. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಈ ಮೊದಲು 6 ಬಾರಿ 4 ಪ್ಲಸ್ ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ್ದರು. ಮೊಹಮ್ಮದ್ ಶಮಿ 7ನೇ ಬಾರಿ 4 ಪ್ಲಸ್ ವಿಕೆಟ್ ಕಬಳಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.