ನ್ಯೂಯಾರ್ಕ್: ಒಂದೇ ಕೈಯಿಂದ ಚಪ್ಪಾಳೆಯಾಗದು ಎಂಬ ಗಾದೆ ಮಾತಿದೆ. ಆದರೆ, ಈತನ ಸಾಧನೆಯ ನಂತರ ಅದನ್ನು ಬದಲಾಯಿಸಬೇಕಾಗಿದೆ…! ಅಮೆರಿಕ ವ್ಯಕ್ತಿಯೊಬ್ಬ ಒಂದೇ ಕೈಯ್ಯಲ್ಲಿ ನೂರಾರು ಬಾರಿ ಚಪ್ಪಾಳೆ ಹೊಡೆದು ಗಿನ್ನಿಸ್ ವಿಶ್ವ ದಾಖಲೆ ಮಾಡಲು ಹೆಜ್ಜೆ ಇಟ್ಟಿದ್ದಾನೆ.
ಕೊರಿ ಮೆಕೆಲ್ಲಾರೋ ಎಂಬಾತ ಬ್ರೋಕ್ ಹ್ಯಾವನ್ ನಗರದ ಹೆರಿಟೇಜ್ ಪಾರ್ಕ್‌ನಲ್ಲಿ ನಿಂತು ಒಂದು ನಿಮಿಷದಲ್ಲಿ 853 ಬಾರಿ ಒಂದೇ ಕೈಯ್ಯಿಂದ ಚಪ್ಪಾಳೆ ಹೊಡೆದಿದ್ದಾನೆ. ಅಂದರೆ, ಒಂದು ಸೆಕೆಂಡ್‌ಗೆ 14 ಚಪ್ಪಾಳೆ ಹೊಡೆದಿದ್ದಾನೆ. 2014 ರಲ್ಲಿ ಇರಾಕ್‌ನ ಹಸನ್ ಅಲ್ಗಾಝಲಿ 1 ನಿಮಿಷದಲ್ಲಿ 683 ಒಂಟಿ ಕೈ ಚಪ್ಪಾಳೆ ಹೊಡೆದು ಗಿನ್ನೆಸ್ ದಾಖಲೆ ಬರೆದಿದ್ದ. ಆತನ ದಾಖಲೆಯನ್ನು ಕೊರಿ ಮೆಕೆಲ್ಲಾರೋ ಮುರಿದಿದ್ದಾನೆ.
ಕೊರಿ ಮೆಕೆಲ್ಲಾರೋ ದಾಖಲೆಯ ಪ್ರದರ್ಶನಕ್ಕೆ ರೊಕಿ ಪೊಯಿಂಟ್ ಟೌನ್ ಕೌನ್ಸಿಲ್ ಮಹಿಳೆ ಜಾನೆ ಬೋನರ್ ಸಾಕ್ಷಿಯಾದರು. ‘ವಿಶ್ವ ದಾಖಲೆ ಮಾಡುವ ಪ್ರದರ್ಶನವೊಂದಕ್ಕೆ ನಾನು ಇದೇ ಮೊದಲ ಬಾರಿಗೆ ಸಾಕ್ಷಿಯಾಗಿದ್ದೇನೆ, ಕೊರಿ ಪ್ರದರ್ಶನ ನೋಡಿ ಖುಷಿಯಾಯಿತು’ ಎಂದು ಜಾನೆ ಬೋನರ್ ಹೇಳಿದ್ದಾರೆ.
ಕೊರಿ ಮೆಕೆಲ್ಲಾರೋ ಒಂಟಿ ಕೈ ಚಪ್ಪಾಳೆ ಪ್ರದರ್ಶನ ವಿಡಿಯೋ, ಆಡಿಯೋ ರೆಕಾರ್ಡ್ ಮಾಡಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್‌ಗೆ ಕಳಿಸಲಾಗಿದೆ. ಬುಕ್ ಆಡಳಿತ ಪರಿಶೀಲಿಸಿ, ದಾಖಲೆಯಾಗಿದ್ದನ್ನು ಘೋಷಿಸಿ ಬುಕ್‌ನಲ್ಲಿ ಪ್ರಕಟಿಸಲಿದೆ.