ದುಬೈ: ಹೊಸದಾಗಿ 2 ಐಪಿಎಲ್ ತಂಡಗಳಿಗೆ ಬಿಡ್ಡಿಂಗ್ ಆರಂಭವಾಗಿದೆ. 2000 ಕೋಟಿ ರೂಪಾಯಿ ಮೂಲ ಬೆಲೆಯನ್ನು ನಿಗದಿಪಡಿಸಿದ್ದು, ಬಿಡ್ಡಿಂಗ್ ನಲ್ಲಿ ಪ್ರತಿ ತಂಡ 7000 ಕೋಟಿ ರೂಪಾಯಿಯಿಂದ 10 ಸಾವಿರ ಕೋಟಿ ರೂಪಾಯಿಗೆ ಮಾರಾಟವಾಗುವ ನಿರೀಕ್ಷೆಯಿದೆ.
ಐಪಿಎಲ್ ತಂಡಗಳನ್ನು ಖರೀದಿಸಲು ಅದಾನಿ ಗ್ರೂಪ್ ಸೇರಿದಂತೆ ಹಲವಾರು ಪ್ರತಿಷ್ಠಿತ ಸಂಸ್ಥೆಗಳು ಆಸಕ್ತಿ ತೋರಿವೆ. ಅಹಮದಾಬಾದ್, ಲಖ್ನೋ, ಇಂದೋರ್, ಗುವಹಾಟಿ, ಪುಣೆ, ಧರ್ಮಶಾಲಾ, ಕಟಕ್ ನಂತಹ ನಗರಗಳು ಸ್ಪರ್ಧೆಯಲ್ಲಿವೆ. 2022ರ ಸೀಸನ್ ಗೆ 20 ಫ್ರಾಂಚೈಸಿಗಳು ಪ್ರವೇಶ ಪಡೆಯುವ ಸಾಧ್ಯತೆ ಇದೆ.
ಸುಮಾರು 22 ಸಂಸ್ಥೆಗಳು 10 ಲಕ್ಷ ರೂಪಾಯಿ ಪಾವತಿಸಿ ಟೆಂಡರ್ ಪ್ರತಿಯನ್ನು ಖರೀದಿಸಿವೆ. ಆದರೆ, ಬಿಸಿಸಿಐ ಪ್ರತಿ ತಂಡದ ಮೂಲ ಬೆಲೆಯನ್ನು 2000 ಕೋಟಿ ರೂಪಾಯಿ ನಿಗದಿಪಡಿಸಿರುವುದರಿಂದ 6 ರಿಂದ 7 ಸಂಸ್ಥೆಗಳ ನಡುವೆ ಮಾತ್ರ ಐಪಿಎಲ್ ತಂಡಗಳ ಖರೀದಿಗೆ ಪ್ರಬಲ ಪೈಪೋಟಿ ನಡೆಯುವ ನಿರೀಕ್ಷೆ ಇದೆ.
ಬಿಸಿಸಿಐ ಪ್ರತಿಷ್ಠಿತ ಸಂಸ್ಥೆಗಳ ತಂಡಗಳ ಖರೀದಿಗೆ ಅವಕಾಶ ನೀಡಿದ್ದರೂ, ಗರಿಷ್ಠ ಮೂರು ಸಂಸ್ಥೆಗಳು ಇಲ್ಲವೇ ವ್ಯಕ್ತಿಗಳು ಒಟ್ಟುಗೂಡಿ ತಂಡವನ್ನು ಖರೀದಿಸಲು ಕೂಡ ಅವಕಾಶ ಕಲ್ಪಿಸಿದೆ. ಇಂತಹ ಸಂಸ್ಥೆಗಳು ಅಥವಾ ವ್ಯಕ್ತಿಗಳು ಕಳೆದ ಮೂರು ವರ್ಷಗಳಲ್ಲಿ ವಾರ್ಷಿಕ 2500 ಕೋಟಿ ರೂಪಾಯಿಯಷ್ಟು ವ್ಯವಹಾರ ನಡೆಸಿರಬೇಕು ಎಂದು ಹೇಳಲಾಗಿದೆ.