ಲುಸೈಲ್: ಮೂರನೇ ಬಾರಿಗೆ ಅರ್ಜೆಂಟೀನಾ ತಂಡ ವಿಶ್ವಕಪ್ ಗೆದ್ದಿದೆ. ರಣರೋಚಕ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಗೆದ್ದು ಬೀಗಿದೆ.
ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡದ ವಿರುದ್ಧ ಗೆಲುವು ಸಾಧಿಸಿದೆ. ಪೆನಾಲ್ಟಿ ಶೂಟೌಟ್ ನಲ್ಲಿ 4 -2 ಗೋಲುಗಳ ಅಂತರದಿಂದ ಅರ್ಜೆಂಟೀನಾ ಜಯಗಳಿಸಿದೆ. 36 ವರ್ಷಗಳ ನಂತರ ಅರ್ಜೆಂಟೀನಾ ತಂಡಕ್ಕೆ ಫಿಫಾ ವಿಶ್ವಕಪ್ ಬಂದಿದೆ.
ಫ್ರಾನ್ಸ್ ಮತ್ತು ಅರ್ಜೆಂಟೀನಾ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ 2-2, ಎಕ್ಸ್ ಟ್ರಾ ವೇಳೆಯಲ್ಲಿ 1-1 ಸಮಬಲ ಸಾಧಿಸಿದ ನಂತರ ಪಂದ್ಯದ ಕುತೂಹಲ ಪೆನಾಲ್ಟಿ ಶೂಟೌಟ್ ಹಂತಕ್ಕೆ ತಲುಪಿತ್ತು.
ರಣರೋಚಕ ಪಂದ್ಯದಲ್ಲಿ ಕೊನೆಗೂ ಅರ್ಜೆಂಟೀನಾ 4 -2 ಅಂತರದ ಗೆಲುವು ಸಾಧಿಸಿದೆ. 1978, 1986ರಲ್ಲಿ ಅರ್ಜೆಂಟೀನಾ ತಂಡ ಫಿಫಾ ವಿಶ್ವಕಪ್ ಗೆದ್ದಿತ್ತು. ಇದೀಗ ಮೂರನೇ ಬಾರಿಗೆ ಫಿಫಾ ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಲಿಯೋನೆಲ್ ಮೆಸ್ಸಿ ಫಿಫಾ ವಿಶ್ವಕಪ್ ಗೆಲ್ಲುವ ಕನಸು ನನಸಾಗಿದ್ದು, ಅವರ ನೇತೃತ್ವದಲ್ಲಿ ಮೊದಲ ಬಾರಿಗೆ ವಿಶ್ವಕಪ್ ಜಯಿಸಿದೆ.