ಹುಬ್ಬಳ್ಳಿಯ ರಾಜನಗರ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಆಟಗಾರರು ಡಿಕ್ಕಿಯಾಗಿ ಕ್ರಿಕೆಟಿಗ ಪ್ರಜ್ವಲ್ ಮಿದುಳಿಗೆ ಪೆಟ್ಟಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(KSCA) ಮೊದಲ ಡಿವಿಜನ್ ಕ್ರಿಕೆಟ್ ಟೂರ್ನಿ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಇಬ್ಬರು ಆಟಗಾರರು ಪರಸ್ಪರ ಡಿಕ್ಕಿ ಹೊಡೆದುಕೊಂಡಿದ್ದಾರೆ. ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ ಎ ಮತ್ತು ಧಾರವಾಡ SDM ಬಿ ತಂಡಗಳ ನಡುವೆ ಶನಿವಾರ ನಡೆದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಪ್ರಜ್ವಲ್ ಶಿರೋಳ ಮತ್ತು ಪ್ರಜ್ವಲ್ ಬೋರಣ್ಣನವರ ಪರಸ್ಪರ ಡಿಕ್ಕಿಯಾಗಿದ್ದು, ಈ ವೇಳೆ ಪ್ರಜ್ವಲ್ ಶಿರೋಳ ಮೈದಾನದಲ್ಲಿ ಕುಸಿದು ಬಿದ್ದಿದ್ದಾರೆ.
ಪ್ರಜ್ಞಾಹೀನರಾಗಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಮಿದುಳಿಗೆ ಬಲವಾಗಿ ಪೆಟ್ಟು ಬಿದ್ದಿರುವುದು ಸ್ಕ್ಯಾನಿಂಗ್ ಮಾಡಿದಾಗ ಗೊತ್ತಾಗಿದೆ. ತಕ್ಷಣವೇ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಲು ಮುಂದಾಗಿದ್ದಾರೆ. ಪೋಷಕರಿಗೆ ಮಾಹಿತಿ ನೀಡಿ ಪ್ರಜ್ವಲ್ ಗೆ ಶಸ್ತ್ರಚಿಕಿತ್ಸೆ ನಡೆಸಿ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಪ್ರಜ್ಞಾಹೀನನಾಗಿದ್ದ ಪ್ರಜ್ವಲ್ ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ. ಆತನ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಭರಿಸಲಿದೆ ಎಂದು ಹೇಳಲಾಗಿದೆ.