ಅವಕಾಶ ಸಿಕ್ಕಲ್ಲಿ ಮುಂಬರುವ ಮೂರು ವಿಶ್ವ ಕಪ್‌ಗಳ ಮಟ್ಟಿಗೆ ಕೀಪಿಂಗ್ ಮಾಡಲು ಸಿದ್ಧರಿರುವುದಾಗಿ ಭಾರತ ಏಕದಿನ ಕ್ರಿಕೆಟ್ ತಂಡದ ಉಪ ನಾಯಕ ಕೆ.ಎಲ್. ರಾಹುಲ್ ತಿಳಿಸಿದ್ದಾರೆ.
ಸೀಮಿತ ಓವರ್‌ಗಳ ಮಾದರಿಯಲ್ಲಿ ಸದ್ಯ ಟೀಂ ಇಂಡಿಯಾದ ಮೊದಲ ಆದ್ಯತೆಯ ಕೀಪರ್-ಬ್ಯಾಟ್ಸ್‌ಮನ್ ಆಗಿರುವ ರಾಹುಲ್, ಈ ವಿಷಯದಲ್ಲಿ ರಿಶಭ್ ಪಂತ್ ಹಾಗೂ ಸಂಜು ಸ್ಯಾಮ್ಸನ್‌ರನ್ನು ಹಿಂದಿಕ್ಕಿದ್ದಾರೆ.
“ಹೀಗೆ ಮಾಡುವುದರಿಂದ ತಂಡದ ಸಮತೋಲನ ಕಾಪಾಡಲು ಸ್ವಲ್ಪ ಮಟ್ಟಿಗೆ ಸಹಾಯವಾದಂತೆ ಆಗುತ್ತದೆ. ಅವಕಾಶ ಸಿಕ್ಕಲ್ಲಿ ಮೂರು ವಿಶ್ವಕಪ್‌ಗಳಲ್ಲಿ ನಾನು ವಿಕೆಟ್ ಕೀಪಿಂಗ್ ಮಾಡಲು ಸಿದ್ಧನಿದ್ದೇನೆ” ಎಂದು ರಾಹುಲ್ ತಿಳಿಸಿದ್ದಾರೆ.
ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಏಕದಿನ ವಿಶ್ವಕಪ್ ಜೊತೆಗೆ ಎರಡು ಟಿ-20 ವಿಶ್ವಕಪ್‌ಗಳ ವೇಳಾಪಟ್ಟಿ ಇದೆ. ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡದೊಂದಿಗೆ ರಾಹುಲ್ ಇದ್ದಾರೆ. ನವೆಂಬರ್ 27ರಿಂದ ಆಸ್ಟ್ರೇಲಿಯಾ ಪ್ರವಾಸದ ಪಂದ್ಯಗಳು ಆರಂಭಗೊಳ್ಳಲಿವೆ.