ನವದೆಹಲಿ: ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲು ಬಿಸಿಸಿಐ ಗುರುವಾರ ಕೆ.ಎಲ್. ರಾಹುಲ್ ಅವರನ್ನು ನಾಯಕರನ್ನಾಗಿ ನೇಮಿಸಿದೆ.
ಆಗಸ್ಟ್ 11 ರಂದು ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಅವರು ODI ಸರಣಿಯಲ್ಲಿ ಆಡಲು ಒಪ್ಪಿಗೆ ನೀಡಲಾಗಿದೆ. ಇದಕ್ಕೂ ಮೊದಲು, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಮೂರು ಪಂದ್ಯಗಳ ಸರಣಿಗೆ ಶಿಖರ್ ಧವನ್ ಅವರನ್ನು ನಾಯಕರನ್ನಾಗಿ ಹೆಸರಿಸಿತ್ತು. ಆದರೆ, ಬಿಸಿಸಿಐ ಇದೀಗ ಕೆ.ಎಲ್. ರಾಹುಲ್ ಅವರನ್ನು ನಾಯಕರನ್ನಾಗಿ ಮತ್ತು ಧವನ್ ಅವರನ್ನು ಉಪನಾಯಕರನ್ನಾಗಿ ನೇಮಿಸಿದೆ.
ಬಿಸಿಸಿಐ ವೈದ್ಯಕೀಯ ತಂಡವು ಕೆ.ಎಲ್. ರಾಹುಲ್ ಅವರನ್ನು ಮೌಲ್ಯಮಾಪನ ಮಾಡಿದೆ. ಜಿಂಬಾಬ್ವೆಯಲ್ಲಿ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲು ಸಮ್ಮತಿಸಿದೆ. ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿಯು ಅವರನ್ನು ತಂಡದ ನಾಯಕರನ್ನಾಗಿ ನೇಮಿಸಿದೆ. ಶಿಖರ್ ಧವನ್ ಅವರನ್ನು ಉಪನಾಯಕನನ್ನಾಗಿ ನೇಮಿಸಿದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಸಿಸಿಐ 3 ಏಕದಿನ ಪಂದ್ಯಗಳಿಗೆ ಸಂಪೂರ್ಣ ತಂಡ ರಚಿಸಿದೆ.
ಕೆ.ಎಲ್. ರಾಹುಲ್ (ನಾಯಕ), ಶಿಖರ್ ಧವನ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್(ವಿಕೆಟ್-ಕೀಪರ್), ಸಂಜು ಸ್ಯಾಮ್ಸನ್(ವಿಕೆಟ್- ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಸರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್.
ಇದರೊಂದಿಗೆ ಜಿಂಬಾಬ್ವೆ ವಿರುದ್ಧದ ವೈಟ್ ಬಾಲ್ ಸರಣಿಗೆ ಕೆ.ಎಲ್. ರಾಹುಲ್ ಭಾರತದ 15 ಸದಸ್ಯರ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2022 ರ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಪ್ರತಿನಿಧಿಸಿದ ನಂತರ ರಾಹುಲ್ ಯಾವುದೇ ಕ್ರಿಕೆಟ್ ಆಡಿಲ್ಲ. ಇದಕ್ಕೂ ಮೊದಲು ಕೆ.ಎಲ್. ರಾಹುಲ್ ಅವರನ್ನು ದಕ್ಷಿಣ ಆಫ್ರಿಕಾ ಸರಣಿಗೆ ನಾಯಕರನ್ನಾಗಿ ನೇಮಿಸಲಾಗಿತ್ತು. ಆದರೆ, ಗಾಯದ ಕಾರಣದಿಂದ ಹಿಂದೆ ಸರಿಯಬೇಕಾಯಿತು.