ಚೆನ್ನೈ: ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ತಮಿಳುನಾಡಿಗೆ ಭೇಟಿ ನೀಡಿದ್ದ ಅರುಣಾಚಲ ಪ್ರದೇಶದ 23 ವರ್ಷದ ಕಿಕ್ ಬಾಕ್ಸರ್ ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆ.
ತಮಿಳುನಾಡು ಕ್ರೀಡಾ ಅಭಿವೃದ್ಧಿ ಸಚಿವ ಶಿವ ವಿ. ಮೆಯ್ಯನಾಥನ್ ಅವರು ಪಾರ್ಥೀವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಅರುಣಾಚಲ ಪ್ರದೇಶದ ಯೋರಾ ತಾಡೆ ಅವರು ಮೃತಪಟ್ಟವರು. ಅವರು ವಾಕೊ ಇಂಡಿಯಾ ನ್ಯಾಷನಲ್ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ 2022 ರಲ್ಲಿ ಭಾಗವಹಿಸಲು ತಮಿಳುನಾಡಿನಲ್ಲಿದ್ದರು. ಅಂತಿಮ ಪಂದ್ಯದ ವೇಳೆ ಎದುರಾಳಿ ಕೇಶವ್ ಮುಡೆಲ್ ನಿಂದ ತಲೆಗೆ ಒದೆಯುವ ಮೂಲಕ ರಿಂಗ್‌ನಲ್ಲಿ ಕುಸಿದುಬಿದ್ದರು.
ತಕ್ಷಣ ಪ್ರಥಮ ಚಿಕಿತ್ಸೆ ನೀಡಿ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ತುರ್ತು ಮಿದುಳಿನ ಶಸ್ತ್ರ ಚಿಕಿತ್ಸೆಗೆ ಕರೆದೊಯ್ದರೂ ಎರಡು ದಿನಗಳ ಬಳಿಕ ಮೃತಪಟ್ಟಿದ್ದಾರೆ. ಸ್ಪರ್ಧೆ ವೇಳೆ ಪೆಟ್ಟಾಗಿದ್ದ ಗಂಭೀರ ಸ್ಥಿತಿಯಲ್ಲಿದ್ದ ಯೋರಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆಎಂದು ವೈದ್ಯರು ತಿಳಿಸಿದ್ದಾರೆ.
ಮಿಶ್ರ ಮಾರ್ಷಲ್ ಆರ್ಟ್ಸ್ ತಜ್ಞ ಯೋರಾ ಅವರು ವರ್ಲ್ಡ್ ಅಸೋಸಿಯೇಷನ್ ಆಫ್ ಕಿಕ್ ಬಾಕ್ಸಿಂಗ್ ಆರ್ಗನೈಸೇಷನ್ಸ್ ಟೂರ್ನಿಯ ಭಾರತೀಯ ಆವೃತ್ತಿಯ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಪೊಲೀಸರು ವಿಚಾರಣೆ ಆರಂಭಿಸಿದ್ದು, ಅವರ ಮೃತದೇಹವನ್ನು ಸ್ವಗ್ರಾಮಕ್ಕೆ ಕಳುಹಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.