ಸ್ಪಾಟ್ ಫಿಕ್ಸಿಂಗ್ ನಲ್ಲಿ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಕೇರಳ ಎಕ್ಸ್ ಪ್ರೆಸ್ ಎಸ್. ಶ್ರೀಶಾಂತ್ ಕೇರಳ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಸಾಧ್ಯತೆ ಇದೆ.
ಸೆಪ್ಟಂಬರ್ ಗೆ ಅವರ ಮೇಲಿನ ನಿಷೇಧ ತೆರವಾಗಲಿದೆ. ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಫಿಟ್ನೆಸ್ ಪರೀಕ್ಷೆಯಲ್ಲಿ ಯಶಸ್ವಿಯಾದರೆ ಶ್ರೀಶಾಂತ್ ಕೇರಳ ಕ್ರಿಕೆಟ್ ತಂಡವನ್ನು ಸೇರಲಿದ್ದಾರೆ ಎಂದು ಕೇರಳ ರಣಜಿ ತಂಡದ ಕೋಚ್ ಟೀನು ಯೋಹಾನನ್ ಹೇಳಿದ್ದಾರೆ.
2013 ರ ಐಪಿಎಲ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಶಾಂತ್ ಭಾಗಿಯಾದ ಆರೋಪದ ಮೇಲೆ ಬಿಸಿಸಿಐ ಜೀವಮಾನ ನಿಷೇಧ ಹೇರಿದ್ದು, ದೆಹಲಿ ವಿಶೇಷ ನ್ಯಾಯಾಲಯ 2015 ರಲ್ಲಿ ಶ್ರೀಶಾಂತ್ ಅವರನ್ನು ದೋಷ ಮುಕ್ತಗೊಳಿಸಿತ್ತು. ಆದರೂ, ಬಿಸಿಸಿಐ ನಿಷೇಧವನ್ನು ಮುಂದುವರೆಸಿತ್ತು.
ಬೇರೆ ದೇಶಗಳ ಲೀಗ್ ಗಳಲ್ಲಿ ಆಡಲು ಅವಕಾಶ ನೀಡುವಂತೆ ಶ್ರೀಶಾಂತ್ ಮನವಿ ಮಾಡಿದ್ದರೂ ಬಿಸಿಸಿಐ ನಿಷೇಧ ಮುಂದುವರೆಸಿದ್ದರಿಂದ ನಿಷೇಧ ತೆರವಿಗೆ ಸೂಚನೆ ನೀಡುವಂತೆ ಕೋರಿ ಶ್ರೀಶಾಂತ್ ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು.
2018 ರ ಕೇರಳ ಹೈಕೋರ್ಟ್ ನಿಷೇಧ ತೆರವುಗೊಳಿಸಲು ಸೂಚನೆ ನೀಡಿದ್ದರೂ, ವಿಭಾಗೀಯ ಪೀಠ ನಿಷೇಧವನ್ನು ಮುಂದುವರೆಸಿತ್ತು. ಶ್ರೀಶಾಂತ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ನಿಷೇಧ ಅವಧಿ ಕಡಿತಗೊಳಿಸಲು ಸೂಚನೆ ನೀಡಲಾಗಿತ್ತು. ಬಿಸಿಸಿಐ ನಿಷೇಧವನ್ನು 7 ವರ್ಷಕ್ಕೆ ನಿಗದಿ ಮಾಡಿದ್ದು, 2013 ರಿಂದ ನಿಷೇಧದ ಅವಧಿ ಆಗಸ್ಟ್ ವೇಳೆಗೆ ಮುಕ್ತಾಯವಾಗಲಿದೆ. ಸೆಪ್ಟೆಂಬರ್ ನಂತರ ಶ್ರೀಶಾಂತ್ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾದರೆ ಕೇರಳ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದೆ.