ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗು ಲೆಜೆಂಡರಿ ಆಲ್‌ರೌಂಡರ್ ಕಪಿಲ್ ದೇವ್ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಹೃದಯ ಸಂಬಂಧಿ ಚಿಕಿತ್ಸೆಯನ್ನು ನವದೆಹಲಿಯ ಆಸ್ಪತ್ರೆಯೊಂದರಲ್ಲಿ ಯಶಸ್ವಿಯಾಗಿ ಮುಗಿಸಿದ ಬಳಿಕ ತಮ್ಮ ಶೀಘ್ರ ಚೇತರಿಕೆಗೆ ಹಾರೈಸಿದ ಎಲ್ಲರಿಗೂ ಕಪಿಲ್ ಧನ್ಯವಾದ ತಿಳಿಸಿದ್ದಾರೆ.
ಎದೆ ನೋವು ಕಾಣಿಸಿಕೊಳ್ಳುತ್ತಲೇ ಕಪಿಲ್ ದೇವ್‌ರನ್ನು ಇಲ್ಲಿನ ಫೋರ್ಟಿಸ್ ಎಸ್ಕಾರ್ಟ್ಸ್ ಹೃದ್ರೋಗ ಸಂಸ್ಥೆಗೆ ದಾಖಲಿಸಲಾಗಿತ್ತು. ಬಳಿಕ ಕಪಿಲ್‌ಗೆ ಕೊರೋನರಿ ಆಂಜಿಯೋಪ್ಲಾಸ್ಟಿ ಸರ್ಜರಿ ತುರ್ತಾಗಿ ಆಗಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ.
62 ವರ್ಷದ ಕಪಿಲ್ ದೇವ್ ಅವರ ಆರೋಗ್ಯ ಸ್ಥಿರವಾಗಿದ್ದು, ಅವರನ್ನು ಬಹಳ ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಇನ್ನೆರಡು ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಟೀಂ ಇಂಡಿಯಾ ಹಾಲಿ ಕಪ್ತಾನ ವಿರಾಟ್ ಕೊಹ್ಲಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕ ಕ್ರಿಕೆಟಿಗರು ಕಪಿಲ್‌ರ ಆರೋಗ್ಯದ ಬಗ್ಗೆ ಕಾಳಜಿ ತೋರಿ ಟ್ವೀಟ್ ಮಾಡಿದ್ದರು.
ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಕಪಿಲ್ ತಮ್ಮ ಹಿತೈಷಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.