
ಆಂಜಿಯೋಪ್ಲಾಸ್ಟಿ ಸರ್ಜರಿಗೆ ಒಳಗಾಗಿದ್ದ ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಎದೆ ನೋವು ಕಾಣಿಸಿಕೊಂಡ ಬಳಿಕ ದೆಹಲಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ 61 ವರ್ಷದ ಕಪಿಲ್, ಆಂಜಿಯೋಪ್ಲಾಸ್ಟಿ ಆದ ಎರಡು ದಿನಗಳಲ್ಲಿ ಡಿಸ್ಚಾರ್ಜ್ ಆಗಿದ್ದಾರೆ.
“ಇಂದು ಮದ್ಯಾಹ್ನ ಕಪಿಲ್ ಡಿಸ್ಚಾರ್ಜ್ ಆಗಿದ್ದಾರೆ. ಅವರು ಆರೋಗ್ಯವಾಗಿದ್ದು ತಮ್ಮ ದೈನಂದಿನ ಚಟುವಟಿಕೆಗಳನ್ನು ಮುಂದುವರೆಸಬಹುದು. ಅವರು ನಿರಂತರವಾಗಿ ಚೆಕಅಪ್ ಗಳನ್ನು ಮಾಡಿಸಿಕೊಳ್ಳುತ್ತಿರುತ್ತಾರೆ” ಎಂದು ಆಸ್ಪತ್ರೆಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಕ್ತನಾಳಗಳಲ್ಲಿ ಉಂಟಾಗುವ ಬ್ಲಾಕೇಜ್‌ಗಳನ್ನು ತೆರವುಗೊಳಿಸಿ, ಹೃದಯಕ್ಕೆ ಸರಬರಾಜಾಗುವ ರಕ್ತ ಸಂಚಾರವನ್ನು ಸಹಜತೆಗೆ ತರಲು ಆಂಜಿಯೋಪ್ಲಾಸ್ಟಿ ಸರ್ಜರಿ ಮಾಡಲಾಗುತ್ತದೆ.
1980ರ ದಶಕದಲ್ಲಿ ಕ್ರಿಕೆಟ್ ಜಗತ್ತಿನ ನಾಲ್ವರು ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದ ಕಪಿಲ್ ದೇವ್, ಭಾರತ ತಂಡದ ಸಾರ್ವಕಾಲಿಕ ಶ್ರೇಷ್ಠರ ಸಾಲಿನಲ್ಲಿ ಅಗ್ರಜರೂ ಆಗಿದ್ದಾರೆ.
131 ಟೆಸ್ಟ್‌ಗಳು ಹಾಗೂ 225 ಏಕದಿನಗಳನ್ನು ಆಡಿರುವ ಕಪಿಲ್, ಕ್ರಮವಾಗಿ 434 ಹಾಗೂ 253 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್‌ನಲ್ಲಿ 5000ಕ್ಕೂ ಹೆಚ್ಚು ರನ್‌ಗಳನ್ನೂ ಗಳಿಸಿದ್ದಾರೆ ಹರಿಯಾಣ ಹರಿಕೇನ್.