ದೇಶದಲ್ಲಿ ಕ್ರಿಕೆಟ್ ಒಂದನ್ನು ಬಿಟ್ಟರೆ ಮಿಕ್ಕ ಕ್ರೀಡೆಗಳಲ್ಲಿ ಸಾಧನೆ ಮಾಡಿರುವವರ ಬದುಕುಗಳು ಹೇಗೆಲ್ಲಾ ಸಾಗುತ್ತಿವೆ ಎಂದು ನಮಗೆಲ್ಲಾ ಚೆನ್ನಾಗಿ ಗೊತ್ತಿರುವ ವಿಚಾರವೇ ಬಿಡಿ.
ಜಾರ್ಖಂಡ್‌ನ ರಾಂಚಿಯಲ್ಲಿರುವ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಒಬ್ಬರು ಹಾಡಿಯಾ (ಅಕ್ಕಿ ಬೀರ್) ಮಾರಾಟ ಮಾಡುತ್ತಾ ಈ ಲಾಕ್‌ಡೌನ್ ಅವಧಿಯಲ್ಲಿ ಜೀವನ ಸಾಗಿಸುವ ಪರಿಸ್ಥಿತಿಗೆ ಸಿಲುಕಿದ ಟ್ರಾಜಿಕ್ ನಿದರ್ಶನವೊಂದು ಟ್ವಿಟರ್‌ನಲ್ಲಿ ಸದ್ದು ಮಾಡುತ್ತಿದೆ.
2011ರಲ್ಲಿ ಜಾರ್ಖಂಡ್‌ನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ 26 ವರ್ಷ ವಯಸ್ಸಿನ ಬಿಮ್ಲಾ ಮುಂಡಾ, 2012ರಲ್ಲಿ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ನಡೆಸಿಕೊಡುವ ಅಂತಾರಾಷ್ಟ್ರೀಯ ಕುಡೋ ಚಾಂಪಿಯನ್‌ಶಿಪ್‌ನ 2012ರ ಕೂಟದಲ್ಲಿ ಚಿನ್ನದ ಪದಕವನ್ನೂ ಗೆದ್ದಿದ್ದಾರೆ.
ರಾಜ್ಯ ಸರ್ಕಾರದ ನೇರ ಉದ್ಯೋಗ ಯೋಜನೆಯಡಿ ಕ್ರೀಡಾಪಟುಗಳಿಗೆ ಉದ್ಯೋಗ ನೀಡುವ ಸ್ಕೀಂನಲ್ಲಿ ಆಯ್ಕೆಯಾಗಿದ್ದ ರಾಜ್ಯದ 33 ಕ್ರೀಡಾಪಟುಗಳ ಪೈಕಿ ಒಬ್ಬರಾಗಿ ಇದೇ ಫೆಬ್ರವರಿಯಲ್ಲಿ ನೇಮಕಗೊಂಡಿದ್ದ ಬಿಮ್ಲಾಗೆ ಇದುವರೆಗೂ ಉದ್ಯೋಗ ಖಾತ್ರಿಯ ಪತ್ರ ಸಿಕ್ಕಿಲ್ಲ.
ಕರಾಟೆ ಕಲಿಯುವ ಉತ್ಸಾಹಿ ಮಕ್ಕಳಿಗೆ ತರಬೇತಿ ಕೊಡಲು ಕೋಚಿಂಗ್ ಕೇಂದ್ರ ಆರಂಭಿಸಿರುವ ಬಿಮ್ಲಾಗೆ ಕಳೆದ ಮಾರ್ಚ್‌ನಿಂದ ಲಾಕ್‌ಡೌನ್ ಆಗಿರುವ ಕಾರಣ ತರಬೇತಿಯನ್ನು ಮುಂದುವರೆಸಲು ಸಾಧ್ಯವಾಗಿಲ್ಲ.
ಪ್ರತಿನಿತ್ಯ 70-80 ಲೋಟ ಹಾಡಿಯಾವನ್ನು ತನ್ನ ಗ್ರಾಮದಲ್ಲಿ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ ಬಿಮ್ಲಾ. ಪ್ರತಿಯೊಂದು ಲೋಟ ಹಾಡಿಯಾಗೂ 4 ರೂ ಚಾರ್ಜ್ ಮಾಡುತ್ತಿದ್ದಾರೆ ಬಿಮ್ಲಾ.