ಇಂಗ್ಲೆಂಡ್ ವಿರುದ್ಧದ 5 ನೇ ಟೆಸ್ಟ್ ನಿಂದ ರೋಹಿತ್ ಶರ್ಮಾ ಹೊರಗುಳಿದ ಹಿನ್ನಲೆಯಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು ಭಾರತ ತಂಡಕ್ಕೆ ನಾಯಕರನ್ನಾಗಿ ನೇಮಿಸಲಾಗಿದೆ. ರಿಷಬ್ ಪಂತ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ವಿರುದ್ಧದ ಮರುನಿಗದಿಪಡಿಸಲಾದ ಐದನೇ ಟೆಸ್ಟ್ ಗೆ ಜಸ್ಪ್ರೀತ್ ಬುಮ್ರಾ ನಾಯಕರಾಗಿ, ರಿಷಬ್ ಪಂತ್ ಉಪನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿ ಶುಕ್ರವಾರ ಈ ನೇಮಕಾತಿ ಪ್ರಕಟಿಸಿದೆ.
ಕೋವಿಡ್ ಗೆ ತುತ್ತಾದ ರೋಹಿತ್ ಚೇತರಿಸಿಕೊಳ್ಳಲು ವಿಫಲರಾಗಿದ್ದಾರೆ ಎಂದು ಬಿಸಿಸಿಐ ಹೇಳಿದೆ. ಕಳೆದ ವಾರ ಲೀಸೆಸ್ಟರ್ ಶೈರ್ ವಿರುದ್ಧದ 4 ದಿನಗಳ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಭಾರತವನ್ನು ಮುನ್ನಡೆಸಿದ್ದರು. ಆದರೆ ಅವರು 2 ನೇ ಇನ್ನಿಂಗ್ಸ್ ನಲ್ಲಿ ಮೈದಾನಕ್ಕೆ ಇಳಿಯಲಿಲ್ಲ.
1987ರಲ್ಲಿ ಕಪಿಲ್ ದೇವ್ ಭಾರತವನ್ನು ಟೆಸ್ಟ್ ನಲ್ಲಿ ಮುನ್ನಡೆಸಿದ ನಂತರ ಬುಮ್ರಾ ಮೊದಲ ವೇಗದ ಬೌಲರ್ ಆಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್ ಗಳ ಸರಣಿಗೆ ತಂಡದ ಉಪನಾಯಕನಾಗಿ ಅವರನ್ನು ನೇಮಿಸಲಾಗಿತ್ತು.
2018 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪದಾರ್ಪಣೆ ಮಾಡಿದ ನಂತರ ಬುಮ್ರಾ ತಮ್ಮ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ 29 ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. 123 ವಿಕೆಟ್ ಪಡೆದಿದ್ದಾರೆ.