ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬೂಮ್ರಾ ಸೋಮವಾರ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರೂ ಗೋವಾದಲ್ಲಿ ಸಪ್ತಪದಿ ತುಳಿದಿದ್ದಾರೆ. ಈ ವಿವಾಹ ಕಾರ್ಯಕ್ರಮದಲ್ಲಿ ಕೇವಲ ಆಪ್ತರು ಮಾತ್ರ ಶಾಮೀಲಾಗಿದ್ದರು. ಮದುವೆಯ ಈ ವಿಶೇಷ ಕಾರ್ಯಕ್ರಮದಂದು ಬೂಮ್ರಾ – ಸಂಜನಾ ಸಬ್ಯಸಾಚಿ ಉಡುಗೆಯಲ್ಲಿ ಮಿಂಚಿದ್ದಾರೆ.
ಬೂಮ್ರಾ ಮದುವೆಯ ಈ ವಿಶೇಷ ದಿನದಂದು ಗುಲಾಬಿ ಬಣ್ಣದ ಕಾರ್ಡಿನೇಷನ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜೋಡಿಯ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಕೆಲವೇ ಕ್ಷಣಗಳಲ್ಲಿ ಪ್ರತಿಷ್ಠಿತ ಡಿಸೈನರ್ ಸಬ್ಯಸಾಚಿ ಈ ಇಬ್ಬರು ತಾರೆಯರು ತಮ್ಮ ಜೀವನದ ಅಮೂಲ್ಯ ದಿನದಂದು ಸಬ್ಯಸಾಚಿ ವಿನ್ಯಾಸಗೊಳಿಸಿದ ಉಡುಗೆ ಧರಿಸಿದ್ದಾರೆ ಎಂದು ಹೇಳಿದೆ.
ಸಂಜನಾ ಗಣೇಶನ್ ಕ್ಲಾಸಿಕ್ ಸಬ್ಯಸಾಚಿ ಬ್ರೈಡಲ್ ಲೆಹೆಂಗಾ ಧರಿಸಿದ್ದರು. ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ಗುಲಾಬಿ ಹೂಗಳ ಎಂಬ್ರಾಯ್ಡರಿಯನ್ನ ಮಾಡಲಾಗಿತ್ತು. ಇನ್ನು ಆಭರಣದ ವಿಚಾರಕ್ಕೆ ಬರೋದಾದ್ರೆ ಸಂಜನಾ ಸಬ್ಯಸಾಚಿಯ ಹೆರಿಟೇಜ್ ಜ್ಯುವೆಲ್ಲರಿ ಧರಿಸಿದ್ದರು. ಇದನ್ನ ಅನಕಟ್ ಡೈಮಂಡ್ ಹಾಗೂ ಪಚ್ಚೆ ಹರಳುಗಳಿಂದ ವಿನ್ಯಾಸಗೊಳಿಸಲಾಗಿದೆ. ಈ ಜ್ಯುವೆಲ್ಲರಿ ಸೆಟ್ 18 ಕ್ಯಾರಟ್ ಚಿನ್ನದಿಂದ ಮಾಡಲಾಗಿದೆ.
ಜಸ್ಪ್ರೀತ್ ಬೂಮ್ರಾ ಗುಲಾಬಿ ಬಣ್ಣದ ರಾ ಸಿಲ್ಕ್ ಶೆರವಾನಿ ಧರಿಸಿದ್ದರು. ಇದರ ಜೊತೆಯಲ್ಲಿ ತುಷಾರ್ ಜಾರ್ಜೆಟ್ ಶಾಲನ್ನ ಧರಿಸಿದ್ದರು. ಈ ಶಾಲಿನ ಮೇಲೆ ಝರಿ ಎಂಬ್ರಾಯ್ಡರಿ ಕೂಡ ಇದೆ. ಜಸ್ಪ್ರೀತ್ ಕೂಡ ತಮ್ಮ ಸಂಪೂರ್ಣ ಲುಕ್ನ್ನು ಸಬ್ಯಸಾಚಿ ಹೆರಿಟೇಜ್ ಕಲೆಕ್ಷನ್ನಿಂದ ಆರಿಸಿಕೊಂಡಿದ್ದಾರೆ.
ಬೂಮ್ರಾ ಹಾಗೂ ಸಂಜನಾ ಮದುವೆಯ ಉಡುಪು ವಿರಾಟ್ ಕೊಹ್ಲಿ ಹಾಗೂ ಅನುಶ್ಕಾ ಶರ್ಮಾರ ವಿವಾಹದ ಉಡುಪಿಗೆ ಭಾರೀ ಹೋಲಿಕೆಯನ್ನ ಹೊಂದಿತ್ತು. ವಿರುಷ್ಕಾ ಕೂಡ ಸಬ್ಯಸಾಚಿಯ ಉಡುಪನ್ನೇ ಧರಿಸಿದ್ದರು.