ಮುಂಬೈ: ಕೊರೋನಾ ಕಾರಣದಿಂದ ಮುಂದೂಡಿಕೆಯಾಗಿರುವ ಐಪಿಎಲ್ 14ನೇ ಆವೃತ್ತಿಯ ಬಾಕಿ ಉಳಿದಿರುವ 31 ಪಂದ್ಯಗಳು ಯುಎಇನಲ್ಲಿ ನಡೆಯಲಿವೆ.
ಸೆಪ್ಟೆಂಬರ್ 15 ರಿಂದ ಐಪಿಎಲ್ ಭಾಗ-2 ಯುಎಇನಲ್ಲಿ ನಡೆಯುವ ಸಾಧ್ಯತೆ ಇದೆ. ನವದೆಹಲಿಯಲ್ಲಿ ಮೇ 29 ರಂದು ನಡೆಯಲಿರುವ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಜೂನ್ ಮೊದಲ ವಾರ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ ಜೂನ್ 18 ರಿಂದ 22 ರ ವರೆಗೆ ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಆಡಲಿದೆ.
ಆಗಸ್ಟ್ 4 ರಿಂದ ಸೆಪ್ಟಂಬರ್ 16 ರವರೆಗೆ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಭಾಗಿಯಾಗಲಿದೆ. 40 ದಿನಗಳ ಪಂದ್ಯಾವಳಿಯಲ್ಲಿ ಪಂದ್ಯಗಳ ನಡುವಿನ ವಿಶ್ರಾಂತಿ ಅವಧಿಯನ್ನು ಬಳಸಿಕೊಂಡು ಐಪಿಎಲ್ ನಡೆಸುವ ಪ್ಲಾನ್ ಸಿದ್ಧಪಡಿಸಲಾಗುತ್ತಿದೆ. ಕಡಿಮೆ ದಿನಗಳಲ್ಲಿ ಹೆಚ್ಚು ಪಂದ್ಯಗಳನ್ನು ನಡೆಸಲು ಪ್ಲಾನ್ ಮಾಡಿಕೊಳ್ಳಲಾಗಿದ್ದು ದಿನಕ್ಕೆ ಎರಡು ಪಂದ್ಯಗಳನ್ನು ನಡೆಸುವ ಚಿಂತನೆ ಇದೆ. ಅತಿ ಕಡಿಮೆ ಅವಧಿಯಲ್ಲಿ ಟೂರ್ನಿ ಪೂರ್ಣಗೊಳಿಸಬೇಕೆಂಬ ಲೆಕ್ಕಾಚಾರ ನಡೆದಿದೆ.