ಮುಂಬೈ: ಕ್ರಿಕೆಟ್ ಲೋಕದ ವರ್ಣರಂಜಿತ ಟೂರ್ನಿ ಐಪಿಎಲ್ 15 ನೇ ಆವೃತ್ತಿ ಇಂದಿನಿಂದ ಆರಂಭವಾಗಲಿದೆ. ಮೇ 29 ರಂದು ಫೈನಲ್ ಪಂದ್ಯ ನಡೆಯಲಿದೆ.
ಪ್ರತಿ ತಂಡ ಲೀಗ್ ಹಂತದಲ್ಲಿ 14 ಪಂದ್ಯಗಳನ್ನು ಆಡಬೇಕಿದೆ. ತನ್ನ ಗುಂಪಿನ ಉಳಿದ ನಾಲ್ಕು ತಂಡಗಳ ವಿರುದ್ಧ ತಲಾ ಎರಡು ಬಾರಿ ಹಾಗೂ ಮತ್ತೊಂದು ಗುಂಪಿನಲ್ಲಿ ತನ್ನದೇ ರ್ಯಾಂಕ್ ತಂಡದ ಜೊತೆಗೆ ಎರಡು ಪಂದ್ಯಗಳಲ್ಲಿ ಆಡಬೇಕಿದೆ. ಮತ್ತೊಂದು ಗುಂಪಿನ ಉಳಿದ ನಾಲ್ಕು ತಂಡಗಳ ವಿರುದ್ಧ ತಲಾ ಒಂದು ಪಂದ್ಯ ಆಡಬೇಕಿದೆ.
ಈ ಗುಂಪಿನಲ್ಲಿ ಮುಂಬೈ ಇಂಡಿಯನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಲಕ್ನೋ ಸೂಪರ್ ಜೈಂಟ್ಸ್ ತಂಡಗಳಿವೆ.
ಬಿ ಗುಂಪಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಇವೆ.
ಎರಡು ಹೊಸ ತಂಡಗಳ ಸೇರ್ಪಡೆಯಿಂದ ಐಪಿಎಲ್ ತಂಡಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. 4 ಪ್ಲೇ-ಆಫ್ ಪಂದ್ಯಗಳು ಸೇರಿದಂತೆ 74 ಪಂದ್ಯಗಳು ನಡೆಯಲಿವೆ.
ಇಂದು ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಇದೇ ಮೊದಲ ಬಾರಿಗೆ ಒಂದೇ ರಾಜ್ಯದಲ್ಲಿ ಟೂರ್ನಿ ಆಯೋಜಿಸಲಾಗಿದೆ. ಮಹಾರಾಷ್ಟ್ರದ ಮುಂಬೈ ಮತ್ತು ಪುಣೆಯ ನಾಲ್ಕು ಸ್ಟೇಡಿಯಂಗಳಲ್ಲಿ ಪಂದ್ಯಗಳು ನಡೆಯಲಿವೆ.