ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಟೂರ್ನಿಯಲ್ಲಿನ ಕೆಲವು ದಾಖಲೆಗಳ ಬಗ್ಗೆ ಮಾಹಿತಿ ಇಲ್ಲಿದೆ. ಆವೃತ್ತಿ ಒಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲಿಗರಾಗಿದ್ದಾರೆ. 2016ರಲ್ಲಿ ವಿರಾಟ್ ಕೊಹ್ಲಿ 16 ಪಂದ್ಯಗಳಲ್ಲಿ 973 ರನ್ ಗಳಿಸಿದ್ದಾರೆ. 4 ಶತಕ, 7 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಅವರ ನಂತರದ ಸ್ಥಾನದಲ್ಲಿ ಸನ್ ರೈಸರ್ಸ್ ಹೈದರಾಬಾದ್ ನ ಕೇನ್ ವಿಲಿಯಮ್ಸನ್ 2018 ರಲ್ಲಿ 735 ರನ್ ಗಳಿಸಿದ್ದರು.
ಹಿರಿಯ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅವರು ಐಪಿಎಲ್ ನಲ್ಲಿ ಮೂರು ಬಾರಿ ಹ್ಯಾಟ್ರಿಕ್ ವಿಕೆಟ್ ಗಳಿಸಿದ್ದಾರೆ. 2008, 2011, 2013 ಹೀಗೆ ಮೂರು ಬಾರಿ ಅಮಿತ್ ಮಿಶ್ರಾ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದು, ಯುವರಾಜ್ ಸಿಂಗ್ ಎರಡು ಬಾರಿ ಹ್ಯಾಟ್ರಿಕ್ ಪಡೆದುಕೊಂಡಿದ್ದಾರೆ.
ವೈಯಕ್ತಿಕ ಗರಿಷ್ಠ ಮೊತ್ತ ಟಿ20 ಕ್ರಿಕೆಟ್ ದೈತ್ಯ ಆಟಗಾರ ಕ್ರಿಸ್ ಗೇಲ್ ಅವರ ಹೆಸರಲ್ಲಿದೆ. 2013 ರಲ್ಲಿ ಆರ್.ಸಿ.ಬಿ. ಆಟಗಾರ ಕ್ರಿಸ್ ಗೇಲ್ 66 ಎಸೆತಗಳಲ್ಲಿ 13 ಬೌಂಡರಿ ಮತ್ತು 17 ಸಿಕ್ಸರ್ ಸಹಿತ ಅಜೇಯ 175 ರನ್ ಸಿಡಿಸಿದ್ದರು. . ಇದು ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್, ವೇಗದ ಶತಕ, ಗರಿಷ್ಠ ಮೊತ್ತವಾಗಿದೆ.
ಒಂದೇ ಓವರ್ ನಲ್ಲಿ 37 ರನ್ ಗಳಿಸಿದ್ದು ದಾಖಲೆಯಾಗಿದೆ. 2011 ರಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ 37 ರನ್ ಕಲೆಹಾಕಿತು. ಪ್ರಶಾಂತ್ ಪರಮೇಶ್ವರನ್ ಅವರ ಓವರ್ ನಲ್ಲಿ ಕ್ರಿಸ್ ಗೇಲ್ 3 ಬೌಂಡರಿ 4 ಸಿಕ್ಸರ್ ಗಳಿಸಿದ್ದರು. ಒಂದು ನೋಬಾಲ್ ಸೇರಿ ಆರ್ಸಿಬಿ 37 ರನ್ ಗಳಿಸಿತ್ತು.
ವೆಸ್ಟ್ ಇಂಡೀಸ್ ನ ಅಲ್ಜಾರ್ರಿ ಜೋಸೆಫ್ 2019 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 12 ರನ್ ಗೆ 6 ವಿಕೆಟ್ ಗಳಿಸಿದ್ದರು. ಅವರು ಐಪಿಎಲ್ ಪಾದಾರ್ಪಣೆ ಪಂದ್ಯದಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನದ ದಾಖಲೆ ಬರೆದಿದ್ದಾರೆ.