ಬೆಂಗಳೂರು: 16ನೇ ಆವೃತ್ತಿಯ ಐಪಿಎಲ್ ನಲ್ಲಿ ಕಪ್ ಗೆಲ್ಲುವ ಆರ್‌ಸಿಬಿ ಕನಸು ಈಡೇರಿಲ್ಲ. ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್‌ಸಿಬಿ ಆರು ವಿಕೆಟ್ ಗಳಿಂದ ಸೋತು ಪ್ಲೇ ಆಫ್ ಎಂಟ್ರಿಯಿಂದ ಹೊರಗುಳಿದಿದೆ. ಗುಂಪು ಹಂತದಲ್ಲೇ ಆರ್‌ಸಿಬಿ ಹೊರಗೆ ಬಿದ್ದಿದೆ.
ಆರ್.ಸಿ.ಬಿ. ಆಟಗಾರ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. 61 ಎಸೆತಗಳಲ್ಲಿ ಅಜೇಯ 101 ರನ್ ಗಳಿಸಿದ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಅವರು ಐಪಿಎಲ್ ನಲ್ಲಿ 7ನೇ ಶತಕ ಪೂರೈಸಿದ್ದು, ಕ್ರಿಸ್ ಗೇಲ್ ಅವರ ಆರು ಶತಕದ ದಾಖಲೆಯನ್ನು ಹಿಂದಿಕ್ಕಿದ್ದಾರೆ. 2016ರಲ್ಲಿ ವಿರಾಟ್ ಕೊಹ್ಲಿ 4 ಶತಕ ಸಿಡಿಸಿದ್ದರು. 2019ರಲ್ಲಿ ಮತ್ತೊಂದು ಶತಕ ಬಾರಿಸಿದ್ದ ಅವರು ಈ ವರ್ಷ ಎರಡು ಶತಕ ಬಾರಿಸಿ ಕ್ರಿಸ್ ಗೇಲ್ ಹೆಸರಿನಲ್ಲಿದ್ದ 6 ಶತಕದ ದಾಖಲೆಯನ್ನು ಹಿಂದಿದ್ದಾರೆ.
ಜೋಸ್ ಬಟ್ಲರ್ 5, ವಾರ್ನರ್, ಶೇನ್ ವಾಟ್ಸನ್, ಕೆ.ಎಲ್. ರಾಹುಲ್ ತಲಾ 4 ಶತಕ ಬಾರಿಸಿದ್ದಾರೆ. ವಿರಾಟ್ ಕೊಹ್ಲಿ 4 ಶತಕಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಡಿಸಿರುವುದು ವಿಶೇಷವಾಗಿದೆ.
2023ರ ಐಪಿಎಲ್ ಹಲವು ಹೊಸ ದಾಖಲೆಗಳಿಗೆ ಸಾಕ್ಷಿಯಾಗಿದ್ದು, ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದು ಆವೃತ್ತಿಯಲ್ಲಿ 11 ಶತಕಗಳು ದಾಖಲಾಗಿವೆ. 2018ರ ಆವೃತ್ತಿಯಲ್ಲಿ 8 ಶತಕ ದಾಖಲಾಗಿದ್ದವು.