ನವದೆಹಲಿ: ಐಪಿಎಲ್ ನಲ್ಲಿ ರೋಚಕತೆಯನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಬಿಸಿಸಿಐ 16ನೇ ಆವೃತ್ತಿಯಲ್ಲಿ ಹೊಸ ನಿಯಮಗಳನ್ನು ಪರಿಚಯಿಸಲು ತೀರ್ಮಾನಿಸಿದೆ.
ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಈಗಾಗಲೇ ಪರಿಚಯಿಸಿರುವ ಬಿಸಿಸಿಐ ತಂಡಗಳ ನಾಯಕರಿಗೆ ಟಾಸ್ ಆದ ನಂತರ ಆಡುವ 11ರ ಬಳಗವನ್ನು ಪ್ರಕಟಿಸುವ ಅವಕಾಶ ಕೂಡ ಕಲ್ಪಿಸಿದೆ. ಹಿಂದಿನ ನಿಯಮಗಳ ಅನ್ವಯ ಟಾಸ್ ವೇಳೆ ತಂಡಗಳು ತಮ್ಮ ಆಡುವ 11 ಆಟಗಾರರ ಬಳಗವನ್ನು ಪ್ರಕಟಿಸಬೇಕಿತ್ತು. ಹೊಸ ನಿಯಮದ ಅನ್ವಯ ಟಾಸ್ ಆದ ನಂತರ ಆಡುವ 11 ಆಟಗಾರರನ್ನು ನಿರ್ಧರಿಸುವ ಅವಕಾಶ ನೀಡಲಾಗಿದೆ.
ಇದರಿಂದಾಗಿ ಟಾಸ್ ಸೋತ ಸಂದರ್ಭದಲ್ಲಿ ಅದಕ್ಕೆ ತಕ್ಕಂತೆ ಆಡುವ 11 ಆಟಗಾರರಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆಟವಾಡುವ ಇಲೆವೆನ್ ನಿಯಮ ಹೊರತಾಗಿ ಟೂರ್ನಿಗೆ ಜಾರಿಗೆ ಬರಲಿರುವ ಪ್ರಮುಖ ನಿಯಮಗಳಲ್ಲಿ ನಿಗದಿತ ಸಮಯದಲ್ಲಿ 20 ಓವರ್ ಗಳನ್ನು ಎಸೆಯಲು ಸಾಧ್ಯವಾಗದಿದ್ದಲ್ಲಿ ಉಳಿದ ಓವರ್‌ಗಳಲ್ಲಿ ಫೀಲ್ಡಿಂಗ್ ತಂಡವು ಕೇವಲ ನಾಲ್ಕು ಫೀಲ್ಡರ್ ಗಳನ್ನು ಮಾತ್ರವೇ ಬೌಂಡರಿ ಗೆರೆ ಬಳಿ ಹೊಂದಬೇಕಿದೆ.
ವಿಕೆಟ್ ಕೀಪರ್ ನಿಯಮಬಾಹಿರ ನಡೆ ಅನುಸರಿಸಿದಲ್ಲಿ ಅದು ಡೆಡ್ ಬಾಲ್ ಎನಿಸಿ ಎದುರಾಳಿ ತಂಡಕ್ಕೆ ಉಡುಗೊರೆಯಾಗಿ ನೀಡಲಾಗುತ್ತದೆ. ಫೀಲ್ಡರ್ ಗಳು ನಿಯಮ ಬದಲಾಯಿಸಿದಲ್ಲಿ ಡೆಡ್ ಬಾಲ್ ಆಧಾರದಲ್ಲಿ ಎದುರಾಳಿಗೆ 5 ರನ್ ನೀಡಲಾಗುವುದು.