ಐಪಿಎಲ್ ಪಂದ್ಯದಲ್ಲಿ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ 99 ರನ್ ಗೆ ನಿನ್ನೆ ವಿಕೆಟ್ ಒಪ್ಪಿಸಿದ್ರು. ಗೇಲ್ 99 ರನ್ ಗೆ ಔಟ್ ಆಗ್ತಿದ್ದಂತೆ ಇಂಗ್ಲೆಂಡ್ ವೇಗದ ಬೌಲರ್ ಜೋಫ್ರಾ ಆರ್ಚರ್ ಭವಿಷ್ಯವಾಣಿ ಬಗ್ಗೆ ಚರ್ಚೆ ಶುರುವಾಗಿದೆ.
ಕ್ರಿಕೆಟ್ ಜಗತ್ತಿನಲ್ಲಿ ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬ ಬಗ್ಗೆ ಜೋಫ್ರಾಗೆ ಮೊದಲೇ ತಿಳಿದಂತೆ ಕಾಣುತ್ತದೆ. ಇದೇ ಕಾರಣಕ್ಕೆ ಈಗಿನ ಘಟನೆ ಹಾಗೂ ಜೋಫ್ರಾ ಹಳೇ ಟ್ವೀಟ್ ಗಳನ್ನು ಅಭಿಮಾನಿಗಳು ತುಲನೆ ಮಾಡಿ ನೋಡಲು ಶುರು ಮಾಡ್ತಾರೆ. ಗೇಲ್ ವಿಷ್ಯದಲ್ಲೂ ಇದೇ ಆಗಿದೆ. ಕಿಂಗ್ಸ್ ಇಲವೆನ್ ಪಂಜಾಬ್ ಸ್ಫೋಟಕ ಬ್ಯಾಟ್ಸ್ ಮೆನ್ ಗೇಲ್ 99 ರನ್ ಗೆ ಔಟ್ ಆದ ನಂತ್ರ ಜೋಫ್ರಾ 7 ವರ್ಷದ ಹಿಂದಿನ ಟ್ವೀಟ್ ವೈರಲ್ ಆಗಿದೆ.
ಜೋಫ್ರಾ ಫೆಬ್ರವರಿ 22,2013 ರಂದು ರಾತ್ರಿ 10 ಗಂಟೆಗೆ ಟ್ವೀಟ್ ಮಾಡಿದ್ದರು. ನಾನು ಬೌಲಿಂಗ್ ಮಾಡ್ತಿದ್ದರೆ ಗೇಲ್ ಗೆ ಶತಕ ಬಾರಿಸಲು ಅವಕಾಶ ನೀಡುವುದಿಲ್ಲವೆಂದು ಟ್ವೀಟ್ ಮಾಡಿದ್ದರು. ಶುಕ್ರವಾರ ರಾತ್ರಿ ಇದೇ ಆಗಿದೆ. ಪಂದ್ಯದ 19 ನೇ ಓವರ್‌ನಲ್ಲಿ ಗೇಲ್, ಜೋಫ್ರಾ ಆರ್ಚರ್ ಅವರ ಮೂರನೇ ಎಸೆತದಲ್ಲಿ ಅದ್ಭುತ ಸಿಕ್ಸರ್ ಸಿಡಿಸಿ 99 ರನ್ ಗಳಿಸಿದರು. ಗೇಲ್ ಮತ್ತೊಂದು ಶತಕ ಗಳಿಸುವುದು ಖಚಿತ ಎನ್ನುವಷ್ಟರಲ್ಲೇ ಜೋಫ್ರಾ ನಾಲ್ಕನೇ ಎಸೆತಕ್ಕೆ ಬೋಲ್ಡ್ ಆದ್ರು. ಇದ್ರಿಂದ ವಿಚಲಿತರಾದ ಗೇಲ್ ಬ್ಯಾಟ್ ಎಸೆದ್ರು. ನಂತ್ರ ಜೋಫ್ರಾ ಕೈ ಕುಲುಕಿದ್ರು. ಈ ಫೋಟೋ ಪೋಸ್ಟ್ ಮಾಡಿರುವ ಜೋಫ್ರಾ, ಗೇಲ್ ಯಾವಾಗ್ಲೂ ಬಾಸ್ ಎಂದು ಬರೆದಿದ್ದಾರೆ.