ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ರಾತ್ರಿ 7.30 ಕ್ಕೆ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಿಸಲಿದೆ.
ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 69 ರನ್ ಸೋಲು ಕಂಡಿದ್ದ ಆರ್ಸಿಬಿ ಇಂದು ಗೆಲುವಿನ ಲಯಕ್ಕೆ ಮರಳಲು ಸಜ್ಜಾಗಿದೆ. ಪುಟಿದೇಳುವ ವಿಶ್ವಾಸದಲ್ಲಿರುವ ಕೊಹ್ಲಿ ಪಡೆಗೆ ರಿಷಬ್ ಪಂತ್ ಬಳಗದ ಸವಾಲು ಎದುರಾಗಿದೆ.
ಉಭಯ ತಂಡಗಳು 25 ಬಾರಿ ಮುಖಾಮುಖಿಯಾಗಿದ್ದು, 14 ಸಲ ಬೆಂಗಳೂರು ತಂಡ ಗೆಲುವು ಕಂಡಿದೆ. 10 ಬಾರಿ ಡೆಲ್ಲಿ ಜಯಗಳಿಸಿದ್ದು, 1 ಪಂದ್ಯದ ಫಲಿತಾಂಶ ಬಂದಿಲ್ಲ. ಆರ್ಸಿಬಿ ಆರಂಭಿಕ ಜೋಡಿಗಳಾದ ವಿರಾಟ್ ಕೊಹ್ಲಿ ಮತ್ತು ದೇವದತ್ತ ಪಡಿಕಲ್ ಉತ್ತಮ ಫಾರ್ಮ್ ನಲ್ಲಿ ಇದ್ದಾರೆ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡು ಬಂದಿದೆ. ದೆಹಲಿ ತಂಡ ಉತ್ತಮ ಬೌಲಿಂಗ್ ಪಡೆಯನ್ನು ಹೊಂದಿದೆ. ಆರ್ಸಿಬಿ ತಂಡದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಎಬಿ ಡಿವಿಲಿಯರ್ಸ್ ಸಿಡಿದರೆ ಉತ್ತಮ ಮೊತ್ತ ಕಲೆಹಾಕಬಹುದು.