
ಕೊರೊನಾ ಸೋಂಕಿಗೆ ಒಳಗಾಗ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಬಯೋ ಬಬಲ್ ನಲ್ಲಿರುವ ಐಪಿಎಲ್ ಆಟಗಾರರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಸೋಮವಾರ ನಡೆಯಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಧ್ಯೆ ನಡೆಯಬೇಕಿದ್ದ ಪಂದ್ಯವನ್ನು ಮುಂದೂಡಲಾಗಿದೆ. 14ನೇ ಋತುವಿನ 30ನೇ ಪಂದ್ಯ ಇಂದು ನಡೆಯಬೇಕಿತ್ತು. ಆದ್ರೆ ಪಂದ್ಯ ಮುಂದೂಡಲಾಗಿದ್ದು, ಎಂದು ನಡೆಯಲಿದೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
ಕೆಕೆಆರ್ ನ ಇಬ್ಬರು ಆಟಗಾರರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಮಾಹಿತಿ ಪ್ರಕಾರ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್ ಕೊರೊನಾ ಸೋಂಕಿಗೊಳಗಾಗಿದ್ದಾರೆ. ನಾಲ್ಕು ದಿನಗಳಲ್ಲಿ ನಡೆದ ಮೂರನೇ ಪರೀಕ್ಷೆಯಲ್ಲಿ ಅವರಿಗೆ ಕೊರೊನಾ ಇರುವುದು ಪತ್ತೆಯಾಗಿದೆ. ತಂಡದ ಉಳಿದ ಆಟಗಾರರ ವರದಿ ನೆಗೆಟಿವ್ ಬಂದಿದೆ.
ವರುಣ್ ಚಕ್ರವರ್ತಿ ಭುಜದ ಸ್ಕ್ಯಾನ್ ಗಾಗಿ ಬಯೋ ಬಬಲ್ ನಿಂದ ಹೊರಗೆ ಹೋಗಿದ್ದರು ಎನ್ನಲಾಗಿದೆ. ಅಲ್ಲಿ ಕೊರೊನಾ ಸೋಂಕಿತರ ಸಂಪರ್ಕಕ್ಕೆ ಅವರು ಬಂದಿರಬಹುದು ಎನ್ನಲಾಗ್ತಿದೆ. ಕೆಕೆಆರ್ ಗೆ ಇಂದಿನ ಪಂದ್ಯ ಮಹತ್ವದ್ದಾಗಿತ್ತು. ಆದ್ರೆ ಇಂದಿನ ಪಂದ್ಯ ರದ್ದಾಗಿರುವುದು ಹಾಗೂ ವರುಣ್ ಚಕ್ರವರ್ತಿಗೆ ಕೊರೊನಾ ಕಾಣಿಸಿಕೊಂಡಿರುವುದು ತಂಡಕ್ಕೆ ಡಬಲ್ ಶಾಕ್ ಸಿಕ್ಕಂತಾಗಿದೆ. ಈ ಸರಣಿಯಲ್ಲಿ 7 ಪಂದ್ಯಗಳನ್ನಾಡಿರುವ ವರುಣ್ 7 ವಿಕೆಟ್ ಪಡೆದಿದ್ದಾರೆ. ಪ್ಲೇ ಆಪ್ ರೇಸ್ ನಲ್ಲಿ ಉಳಿಯಲು ಕೆಕೆಆರ್ ಗೆ ಇದು ಮಹತ್ವದ ಪಂದ್ಯವಾಗಿದೆ.